ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಾಗತಿಕ ದಿಗ್ಗಜರು ಎಂದು ಕರೆಸಿಕೊಳ್ಳುವ ದೊಡ್ಡದೊಡ್ಡ ಕಂಪನಿಗಳು ತಮ್ಮಲ್ಲಿರುವ ಉನ್ನತ ಪ್ರತಿಭೆ ಗಳನ್ನು ಉಳಿಸಿಕೊಳ್ಳಲು ಸಂಬಳ ಏರಿಕೆಯ ಮೊರೆ ಹೋಗುತ್ತಿವೆ. ಆಮೂಲಕ ಕಂಪನಿಯಲ್ಲಿರುವ ಉತ್ತಮ ಕೆಲಸಗಾರರನ್ನು ತಮ್ಮಲ್ಲಿಯೇ ಉಳಿಸಿಕೊಂಡು ಹೊಸಬರನ್ನು ತಮ್ಮೆಡೆಗೆ ಸೆಳೆದು ಕೊಳ್ಳುವ ಪ್ರಯತ್ನ ಮಾಡುತ್ತಿವೆ.
ಇತ್ತೀಚೆಗೆ ಸಾಫ್ಟವೇರ್ ದಿಗ್ಗಜ ಮೈಕ್ರೋಸಾಫ್ಟ್ ಕಂಪೆನಿಯ ಸಿಇಒ ಸತ್ಯಾ ನಾಡೆಲ್ಲ ತಮ್ಮ ಉದ್ಯೋಗಿಗಳಿಗೆ ಇ-ಮೇಲ್ ಸಂದೇಶವೊಂದನ್ನು ಕಳುಹಿಸಿ “ನಿಮ್ಮ ಸೇವೆಯು ಕಂಪನಿಗೆ ಉತ್ತಮ ಲಾಭವನ್ನು ತಂದುಕೊಡುವಲ್ಲಿ ಸಹಾಯ ಮಾಡಿದೆ ಮತ್ತು ತನ್ನ ಗ್ರಾಹಕರು ಮತ್ತು ಪಾಲುದಾರರನ್ನು ಸಶಕ್ತಗೊಳಿಸಲು ನಿಮ್ಮ ಕೊಡುಗೆಗೆ ಧನ್ಯವಾದಗಳು. ಆದ್ದರಿಂದ ನಾವು ನಿಮ್ಮ ಮೇಲೆ ದೀರ್ಘಕಾಲೀನ ಹೂಡಿಕೆಯನ್ನು ಮಾಡುತ್ತಿದ್ದೇವೆ” ಎಂದು ಹೇಳುವ ಮೂಲಕ ಪರೋಕ್ಷವಾಗಿ ಸಂಬಳ ಏರಿಕೆಯ ಸಿಹಿಸುದ್ದಿ ನೀಡಿದ್ದಾರೆ. ಅವರ ಹೇಳಿಕೆಯ ಪ್ರಕಾರ ಮೈಕ್ರೋಸಾಪ್ಟ್ ತನ್ನ ಜಾಗತಿಕ ಮೆರಿಟ್ ಬಜೆಟ್ ಅನ್ನು ದ್ವಿಗುಣಗೊಳಿಸಿದೆ.
ಕೇವಲ ಮೈಕ್ರೋಸಾಪ್ಟ್ ಒಂದೇ ಅಲ್ಲ ಪ್ರಪಂಚದಾದ್ಯಂತ ದೊಡ್ಡ ದೊಡ್ಡ ಟೆಕ್ ಕಂಪನಿಗಳು ಉನ್ನತ ಪ್ರತಿಭೆಗಳನ್ನು ಉಳಿಸಿಕೊಳ್ಳಲು ಸಂಬಳ ಏರಿಕೆಯ ಮೊರೆ ಹೋಗಿದ್ದಾರೆ. ಫೆಬ್ರವರಿಯಲ್ಲಿ ಅಮೇಜಾನ್ ಕೂಡ ತನ್ನಲ್ಲಿರುವ ಪ್ರತಿಭೆಗಳನ್ನು ಉಳಿಸಿಕೊಳ್ಳಲು ಮತ್ತು ಹೊಸ ಪ್ರತಿಭೆಗಳನ್ನು ನೇಮಿಸಿಕೊಳ್ಳಲು ಸಂಬಳ ಏರಿಕೆ ಮಾಡಿದ್ದು ಗರಿಷ್ಠ ಮೂಲವೇತನವನ್ನು $160,000 ರಿಂದ $350,000ಕ್ಕೆ ಏರಿಕೆ ಮಾಡಿದೆ.
ಇದಲ್ಲದೇ ಪ್ರತಿಷ್ಟಿತ ಗೂಗಲ್ ಕೂಡ ಜನವರಿಯಲ್ಲಿ ತನ್ನ ನಾಲ್ವರು ಉನ್ನತ ಕಾರ್ಯನಿರ್ವಾಹಕರ ಸಂಬಳವನ್ನು ಹೆಚ್ಚಿಸಿತ್ತು. ಅವರ ಮೂಲ ವೇತನವನ್ನು $650,000 ರಿಂದ $1 ಮಿಲಿಯನ್‌ಗೆ ಏರಿಕೆ ಮಾಡಿತ್ತು.