ಚಿತ್ರಾನ್ನ ಅಂದರೆ ಎಲ್ಲರ ಮನೆಗಳಲ್ಲಿ ಮಾಡೋ ಒಂದು ಸಾಮಾನ್ಯ ಆದರೆ ಸದಾ ಪ್ರಿಯವಾದ ತಿಂಡಿ. ಬಣ್ಣ, ರುಚಿ, ಸುವಾಸನೆ ಎಲ್ಲವೂ ಸೇರಿ ಚಿತ್ರಾನ್ನ ಅನ್ನೋದೇ ಒಂದು ಸಂಭ್ರಮ! ಈಗ ಆ ಚಿತ್ರಾನ್ನದ ಲಿಸ್ಟ್‌ಗೆ ಹೊಸದಾಗಿ ಸೇರ್ಪಡೆ ಆಗ್ತಿರೋದು “ಪುಡಿ ಚಿತ್ರಾನ್ನ”. ಇದು ಹಳೆಯ ಸಂಪ್ರದಾಯದ ರುಚಿ. ತಿನ್ನೋಕೆ ಪುಳಿಯೋಗರೆ ಹೋಲುತ್ತದೆ, ಆದರೆ ಸ್ವಲ್ಪ ವಿಭಿನ್ನ ಸುವಾಸನೆ ಮತ್ತು ರುಚಿ ಇರುತ್ತೆ.
ಬೇಕಾಗುವ ಪದಾರ್ಥಗಳು:
ಅಕ್ಕಿ – ಕಾಲು ಕೆಜಿ
ಒಣ ಕೊಬ್ಬರಿ ತುರಿ – 4 ಚಮಚ
ಬ್ಯಾಡಗಿ ಮೆಣಸಿನಕಾಯಿ – 6 ರಿಂದ 8
ಕಡಲೆ ಬೇಳೆ – 1 ಟೇಬಲ್ ಚಮಚ
ಉದ್ದಿನ ಬೇಳೆ – 2 ಟೀ ಚಮಚ
ಧನಿಯಾ – 1 ಟೀ ಚಮಚ
ಬಿಳಿ ಎಳ್ಳು – 2 ಟೀ ಚಮಚ
ಮೆಂತ್ಯ – 1/4 ಟೀ ಚಮಚ
ಸಾಸಿವೆ – 1/2 ಟೀ ಚಮಚ
ಜೀರಿಗೆ – 1/2 ಟೀ ಚಮಚ
ಹುಣಿಸೆ ರಸ – 4 ಚಮಚ
ಬೆಲ್ಲ – 2 ಕಡಲೇ ಬೀಜದ ಗಾತ್ರ
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – 4 ಚಮಚ
ಕರಿಬೇವು, ಇಂಗು, ಅರಶಿನ – ಬೇಕಾದಷ್ಟು
ಮಾಡುವ ವಿಧಾನ:
ಮೊದಲಿಗೆ ಅಕ್ಕಿಯನ್ನು ಬೇಯಿಸಿ ಉದುರುದುರಾಗಿ ಅನ್ನ ಮಾಡಿ.
ಸ್ವಲ್ಪ ಕಡಲೆ ಬೇಳೆ, ಉದ್ದಿನ ಬೇಳೆ, ಧನಿಯಾ, ಎಳ್ಳು, ಮೆಂತ್ಯ, ಸಾಸಿವೆ, ಜೀರಿಗೆ — ಇವುಗಳನ್ನು ಎಣ್ಣೆ ಹಾಕದೆ ಬೇರೆಬೇರೆ ಹುರಿದು ಪುಡಿ ಮಾಡಿ. ಅದಕ್ಕೆ ಕೊಬ್ಬರಿ ತುರಿ ಮತ್ತು ಮೆಣಸಿನಕಾಯಿ ಪುಡಿ ಸೇರಿಸಿ ಮತ್ತೆ ಒಟ್ಟಿಗೆ ಪುಡಿ ಮಾಡಿ.
ಹುಣಿಸೆ ರಸ ಮತ್ತು ಬೆಲ್ಲವನ್ನು ಒಂದು ಪಾತ್ರೆಯಲ್ಲಿ ಹಾಕಿ ಸ್ವಲ್ಪ ಕುದಿಸಿ.
ಈಗ ಬಾಣಲೆಯಲ್ಲಿ ಎಣ್ಣೆ ಹಾಕಿ ಸಾಸಿವೆ, ಕಡಲೇ ಬೇಳೆ, ಉದ್ದಿನ ಬೇಳೆ, ಕರಿಬೇವು, ಇಂಗು, ಅರಶಿನ ಹಾಕಿ ಹುರಿಯಿರಿ. ಅದಕ್ಕೆ ಹುಣಿಸೆ ರಸ ಮತ್ತು ಉಪ್ಪು ಸೇರಿಸಿ ಸ್ವಲ್ಪ ಕುದಿಸಿ.
ಈಗ ಅನ್ನವನ್ನು ದೊಡ್ಡ ತಟ್ಟೆಯಲ್ಲಿ ಹರಡಿ, ಮೇಲೆ ಮಾಡಿಟ್ಟ ಒಗ್ಗರಣೆ ಮತ್ತು ಪುಡಿ ಹಾಕಿ ಚೆನ್ನಾಗಿ ಕಲೆಸಿಕೊಳ್ಳಿ. ಕೊನೆಯಲ್ಲಿ ಕರಿದ ಕಡಲೇ ಬೀಜ ಹಾಕಿ ಸರ್ವ್ ಮಾಡಬಹುದು.

