ಹೊಸದಿಗಂತ ಡಿಜಿಟಲ್ ಡೆಸ್ಕ್
ಮಸೀದಿ ನವೀಕರಣದ ವೇಳೆ ದೇವಸ್ಥಾನ ಪತ್ತೆಯಾದ ಮಂಗಳೂರು ತಾಲೂಕಿನ ಮಳಲಿ(ಮಣೇಲ್)ಯ ಮಸೀದಿ ಪ್ರದೇಶದಲ್ಲಿ ಸುಮಾರು 1,500 ವರ್ಷಗಳ ಹಿಂದೆ ಹಿಂದು ಸಾನಿಧ್ಯವಿತ್ತು ಶಿವ ಸನ್ನಿಧಿಯಾಗಿತ್ತು ಅಲ್ಲದೇ ಇಲ್ಲಿ ಗುರುಮಠವೂ ಇತ್ತು. ಎತ್ತರದ ಗುಡ್ಡದಲ್ಲಿ ಮುನಿಯೊಬ್ಬರು ತಪ್ಪಸ್ಸು ಮಾಡಿದ್ದು, ಇಲ್ಲಿನ ವಿಶಾಲ ಪ್ರದೇಶದಲ್ಲಿ 10ಕ್ಕೂ ಹೆಚ್ಚು ಪುರಾತನ ಹಿಂದೂ ದೇವಾಲಯಗಳಿದ್ದು, ಕಾಲಾನಂತರದಲ್ಲಿ ಅವು ನಾಶವಾಗಿವೆ. ಮಸೀದಿ ಪ್ರದೇಶವು ಇಂತಹ ಹಿಂದೂ ದೇವರ ಸಾನಿಧ್ಯವಿದ್ದ ಜಾಗವಾಗಿದ್ದು, ಅನಾದಿ ಕಾಲದಲ್ಲಿ ಇಲ್ಲಿ ನಡೆದಿದ್ದ ವಾದ-ವಿವಾದ, ಸಂಘರ್ಷದ ಫಲವಾಗಿ ಇಲ್ಲಿನವರು ಬೇರೆಡೆಗೆ ಹೋಗಿದ್ದರೂ, ಕೆಲವರು ಉಳಿದುಕೊಂಡಿರುವುದಕ್ಕೆ ಈಗ ಗೋಚರವಾಗಿರುವ ಸ್ಥಳ ಸಾಕ್ಷ್ಯಿಯಾಗಿದೆ ಎಂದು ತಾಂಬೂಲ ಪ್ರಶ್ನೆಯಲ್ಲಿ ಬಹಿರಂಗವಾಗಿದೆ.
ಮಳಲಿಯ ಪುರಾತನ ಮಸೀದಿಯ ಆವರಣದೊಳಗೆ ಬೆಳಕಿಗೆ ಬಂದಿರುವ ಹಿಂದೂ ದೇವಾಲಯದ ಕಟ್ಟಡ ರಚನೆಯ ಬಗ್ಗೆ ಎದ್ದಿರುವ ಸಂದೇಹಗಳ ನಿವಾರಣೆಗಾಗಿ ಹಿಂದೂ ಸಂಘಟನೆಗಳು ಮೇ. 25ರಂದು ಗಂಜಿಮಠ ಪಂಚಾಯತ್ ವ್ಯಾಪ್ತಿಯ ಮಳಲಿಯ ಶ್ರೀ ರಾಮಾಂಜನೇಯ ಭಜನಾ ಮಂದಿರದಲ್ಲಿ ಕೇರಳ ಪಯ್ಯನಾಡಿನ ಖ್ಯಾತ ಪ್ರಶ್ನ ಚಿಂತನ ತಜ್ಞ ಜಿ.ಪಿ. ಗೋಪಾಲ ಕೃಷ್ಣ ಪಣಿಕ್ಕರ್ ಅವರ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ತಾಂಬೂಲ ಪ್ರಶ್ನೆಯಲ್ಲಿ ಸಂಖ್ಯಾ, ತಾಂಬೂಲ ರೂಢ, ಜೋತಿಷ್ಯ ಮತ್ತು ಕವಡೆ ಶಾಸ್ತ್ರ ಮುಂದಿಟ್ಟು ವಿವರಣೆ ನೀಡಿದ ಪಣಿಕ್ಕರ್ ಅವರು ಪುರಾತನದಲ್ಲಿ ಇಲ್ಲಿ ಗುರುಮಠವಿತ್ತು.ಇದು ಶಿವ ಸಾನಿಧ್ಯ, ದುರ್ಗೆಯ ಆರಾಧನಾ ಕೇಂದ್ರವಾಗಿತ್ತು. ಕಾರಣಾಂತರಗಳಿಂದ ಬಹುತೇಕ ಮಂದಿ ಈ ಊರು ಬಿಟ್ಟು ಹೋಗಿದ್ದರೂ, ಒಂದಷ್ಟು ಮಂದಿ ಇಲ್ಲಿ ಉಳಿದುಕೊಂಡಿದ್ದರು. ಬಳಿಕ ಅವೆಲ್ಲವೂ ನಾಶವಾಗಿವೆ. ವಿವಾದಿತ ಸ್ಥಳದಲ್ಲಿ ಹಿಂದೂ ದೇವರ ಚೈತನ್ಯ ರೂಪವಿರುವುದು ಸ್ಪಷ್ಟ. ಸುತ್ತಲ ಪ್ರದೇಶದಲ್ಲಿ ಇದಕ್ಕೆ ಸಂಬಂಧಿಸಿ ಕೆರೆ, ಉಳಿಕೆ ಪುರಾವೆಗಳು ಇವೆ. ಈ ಜಾಗದ ಅಭಿವೃದ್ಧಿಗೆಂದು ಮುಂದಾಗಿರುವ ಯಾರೇ ಇರಬಹುದು, ಹಿಡಿದ ಕೆಲಸ ಪೂರ್ಣಗೊಳಿಸಬೇಕು. ಇದರಿಂದ ಊರಿನ ಎಲ್ಲರಿಗೂ ಒಳ್ಳೆಯದಾಗುತ್ತದೆ. ಇಲ್ಲವೆಂದಾರೆ ಊರಿಗೆ ಸಂಕಷ್ಟ ಎದುರಾಗುವುದು ಖಚಿತ ಎಂದರು.
ಬಿಗಿ ಪೊಲೀಸ್ ಬಂದೋಬಸ್ತು
ಮುಸ್ಲಿಂ ಬಾಹುಳ್ಯದ ಪ್ರದೇಶವಾಗಿರುವ ಕಾರಣ ಮಳಲಿಯಲ್ಲಿ ನಡೆದ ತಾಂಬೂಲ ಪ್ರಶ್ನೆ ನಡೆದ ವೇಳೆ ಸುತ್ತಲ ಪ್ರದೇಶದಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗಿತ್ತು. ಮಳಲಿ ಸಂಪರ್ಕಿಸುವ ಎಲ್ಲ ರಸ್ತೆಗಳು ಮತ್ತು ಆಯಕಟ್ಟಿನ ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸ್ ಬಂದೋಬಸ್ತು ಏರ್ಪಡಿಲಾಗಿತ್ತು. ಎಲ್ಲೂ ಯಾವುದೇ ರೀತಿಯ ಅಹಿತಕರ ಘಟನೆ ಸಂಭವಿಸಿಲ್ಲ. ಮಧ್ಯಾಹ್ನದೊಳಗೆ ತಾಂಬೂಲ ಪ್ರಶ್ನೆ ಪೂರ್ಣಗೊಂಡಿದ್ದರೂ, ರಾತ್ರಿ 8 ಗಂಟೆಯವರೆಗೆ ಸೆಕ್ಷನ್ ಮುಂದುವರಿದಿದೆ.