ಹೊಸದಿಗಂತ ಡಿಜಿಟಲ್ ಡೆಸ್ಕ್
ಉತ್ತರ ಪ್ರದೇಶದ ವಾರಣಾಸಿಯಲ್ಲಿರುವ ಜ್ಞಾನವಾಪಿ ಮಸೀದಿಯಲ್ಲಿ ಪತ್ತೆಯಾದ ಶಿವಲಿಂಗದ ದರುಶನ ಪೂಜೆ ನಡೆಸಲು ಅನುಮತಿ ಕೋರಿವಿಶ್ವ ವೈದಿಕ್ ಸನಾತನ ಸಂಘದ ಪರವಾಗಿ ಕಿರಣ್ ಸಿಂಗ್ ಸ್ಥಳೀಯ ನ್ಯಾಯಾಲಯದಲ್ಲಿ ಹೊಸ ಅರ್ಜಿಯನ್ನು ಸಲ್ಲಿಸಿದ್ದಾರೆ.
ಅರ್ಜಿಯ ವಿಚಾರಣೆ ನಡೆಸಿದ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಎ ಕೆ ವಿಶ್ವೇಶ್ ಅವರು, ಪ್ರಕರಣವನ್ನು ತ್ವರಿತ ನ್ಯಾಯಾಲಯಕ್ಕೆ ವರ್ಗಾಯಿಸಲು ಆದೇಶಿಸಿದರು ಎಂದು ಸರ್ಕಾರಿ ವಕೀಲ ರಾಣಾ ಸಂಜೀವ್ ಸಿಂಗ್ ಅವರು ಹೇಳಿದ್ದಾರೆ.
ತ್ವರಿತ ನ್ಯಾಯಾಲಯದ ನ್ಯಾಯಾಧೀಶ ಮಹೇಂದ್ರ ಕುಮಾರ್ ಪಾಂಡೆ ಅನುಪಸ್ಥಿತಿಯಲ್ಲಿ ಬುಧವಾರ ಅರ್ಜಿ ವಿಚಾರಣೆಗೆ ಬರಲಿಲ್ಲ. ಮುಂದಿನ ವಿಚಾರಣೆಯನ್ನು ಮೇ 30ಕ್ಕೆ ನಿಗದಿಪಡಿಸಲಾಗಿದೆ.
ಕಿರಣ್ ಸಿಂಗ್ ಅವರು ಫಿರ್ಯಾದಿಯ ಪರವಾಗಿ ಈ ಅರ್ಜಿಯನ್ನು ಸಲ್ಲಿಸಿದ್ದಾರೆ. ಇದರಲ್ಲಿ ಮಸೀದಿ ಆವರಣದಲ್ಲಿ ಕಂಡುಬರುವ ಶಿವಲಿಂಗವನ್ನು ಪೂಜಿಸಲು ಅನುಮತಿ ಕೋರಲಾಗಿದೆ. ಇದರೊಂದಿಗೆ ಅನ್ಯ ಧರ್ಮೀಯರ ಪ್ರವೇಶವನ್ನು ನಿಷೇಧಿಸಬೇಕು ಎಂಬ ಒತ್ತಾಯವೂ ಕೇಳಿಬಂದಿದೆ.