ಹೊಸದಿಗಂತ ವರದಿ, ಮಡಿಕೇರಿ:
ಕೈಕೇರಿ ಗ್ರಾಮದ ನಿರ್ಮಾಣ ಹಂತದ ಮನೆಯೊಂದರಲ್ಲಿ ಪತ್ತೆಯಾದ ನಾಗರಹಾವಿನ ಸುಮಾರು 15 ಮೊಟ್ಟೆಗಳಿಗೆ ಕೃತಕ ಕಾವು ನೀಡಿದ ಪರಿಣಾಮ ಮರಿಗಳ ಜನನವಾಗಿದೆ.
ಕಟ್ಟಡದಲ್ಲಿ ಮೊಟ್ಟೆಗಳಿರುವ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ್ದ ಉರಗ ರಕ್ಷಕರಾದ ನವೀನ್ ಹಾಗೂ ಮನೋಜ್ ಮೊಟ್ಟೆಗಳನ್ನು ಸಂರಕ್ಷಿಸಿದ್ದರು. ನಂತರ ಬಾಟಲಿಯಲ್ಲಿಟ್ಟು ಸುಮಾರು 70 ದಿನಗಳ ಕಾಲ ಕೃತಕ ಕಾವು ನೀಡಿದರು. ಇದರ ಪರಿಣಾಮ 15 ಮರಿಗಳ ಜನನವಾಗಿದ್ದು, ಸ್ವಲ್ಪ ದಿನಗಳ ಆರೈಕೆಯ ನಂತರ ಅರಣ್ಯ ಪ್ರದೇಶಕ್ಕೆ ಬಿಡುವಲ್ಲಿ ಯಶಸ್ವಿಯಾಗಿದ್ದಾರೆ.
ಪೊನ್ನಂಪೇಟೆಯಲ್ಲೂ ರಕ್ಷಣೆ: ಇತ್ತೀಚೆಗೆ ಪೊನ್ನಂಪೇಟೆಯ ಕಾಲೇಜೊಂದರ ಸಮೀಪ ಕೇರೆ ಹಾವಿನ 24 ಮೊಟ್ಟೆಗಳನ್ನು ರಕ್ಷಣೆ ಮಾಡಿ ಮರಿಗಳನ್ನು ಅರಣ್ಯ ಪ್ರದೇಶಕ್ಕೆ ಬಿಡಲಾಗಿತ್ತು.
ಕೊಡಗು ತಕ್ಷ ಸಂರಕ್ಷರ ಸಂಘದ ಮೂಲಕ ಹಾವಿನ ರಕ್ಷಣಾ ಅಭಿಯಾನ ನಡೆಯುತ್ತಿದೆ. ಜಿಲ್ಲೆಯ ವಿವಿಧ ಭಾಗಗಳಲ್ಲಿ ಉರಗ ರಕ್ಷಕರಿದ್ದು ಹಾವುಗಳು ಕಂಡು ಬಂದಲ್ಲಿ ಮಾಹಿತಿ ನೀಡುವಂತೆ ಸಂಘದ ಅಧ್ಯಕ್ಷ ಸುರೇಶ್ ಮನವಿ ಮಾಡಿದ್ದಾರೆ.
ಸಾರ್ವಜನಿಕ ಸ್ಥಳಗಳಲ್ಲಿ ಕಂಡುಬರುವ ಹಾವು ಮತ್ತು ಹಾವಿನ ಮೊಟ್ಟೆಗಳನ್ನು ರಕ್ಷಣೆ ಮಾಡುತ್ತಿರುವ ಉರಗ ರಕ್ಷಕರ ಸೇವಾ ಕಾರ್ಯದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.