ರಾಜ್ಯದ ಮೊದಲ ಗ್ರಾಮೀಣ ಎಫ್‍ಎಸ್‍ಟಿ ಘಟಕ ನಿರ್ಮಾಣ: ಶಾಸಕ ಬೋಪಯ್ಯ ಮೆಚ್ಚುಗೆ

ಹೊಸ ದಿಗಂತ ವರದಿ, ಮಡಿಕೇರಿ:

ಕರ್ನಾಟಕ ರಾಜ್ಯಕ್ಕೇ ಮಾದರಿಯಾಗುವಂತಹ ಗ್ರಾಮೀಣ ಭಾಗದ ಮೊದಲ ಮಲತ್ ಯಾಜ್ಯ ನಿರ್ವಹಣಾ ಘಟಕ ಕೊಡಗು ಜಿಲ್ಲೆಯ ಭಾಗಮಂಡಲ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಆರಂಭವಾಗಿದೆ ಎಂದು ಸರ್ಕಾರಿ ಜಮೀನುಗಳ ಸಂರಕ್ಷಣಾ ಸಮಿತಿ ಅಧ್ಯಕ್ಷ ಹಾಗೂ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಅವರು ತಿಳಿಸಿದರು.
ಭಾಗಮಂಡಲ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಮಲ ತ್ಯಾಜ್ಯ ನಿರ್ವಹಣಾ ಘಟಕ (ಎಫ್‍ಎಸ್‍ಟಿಪಿ)ವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.
ಎಂಟು ವರ್ಷಗಳ ಹಿಂದೆ ದೇಶದ ಪ್ರಧಾನಮಂತ್ರಿಗಳು ಇದೇ ದಿನದಂದು ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದರು. ಬಳಿಕ ಸ್ವಚ್ಛ ಭಾರತ್ ಮಿಷನ್ ಯೋಜನೆಯನ್ನು ಘೋಷಣೆ ಮಾಡಿದರು. ಈ ಮೂಲಕ ಸ್ವಚ್ಛತೆಯ ಅರಿವನ್ನು ದೇಶಾದ್ಯಂತ ತಲುಪಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಬೋಪಯ್ಯ ನುಡಿದರು.
ಮಲ ತ್ಯಾಜ್ಯ ಯಾವುದೇ ಕಾರಣಕ್ಕೂ ನದಿಯನ್ನು ಸೇರಬಾರದು. ಭಾಗಮಂಡಲ, ದೇಶದ ಪವಿತ್ರ ಪುಣ್ಯಕ್ಷೇತ್ರಗಳಲ್ಲಿ ಒಂದಾಗಿದೆ. ಪೂಜೆಗೂ ಮಿಗಿಲಾಗಿ, ಇಲ್ಲಿನ ತೀರ್ಥಸ್ನಾನಕ್ಕೆ ದೈವಿಕ ಭಾವವಿದೆ. ಹೊರಗಿನ ಜನರಿಗೆ ಇಲ್ಲಿನ ನೀರು ಕಲುಷಿತವಾಗಿದೆ ಎಂಬ ಭಾವನೆ ಬಾರದ ನಿಟ್ಟಿನಲ್ಲಿ ಕ್ಷೇತ್ರದ ಸ್ವಚ್ಛತೆ ಮತ್ತು ಪಾವಿತ್ರ್ಯತೆಯನ್ನು ಕಾಪಾಡಬೇಕು ಎಂದು ಅವರು ಸಲಹೆ ಮಾಡಿದರು.

41ಲಕ್ಷ ರೂ. ವೆಚ್ಚ

ನೂತನವಾಗಿ ನಿರ್ಮಾಣವಾಗಿರುವ ಮಲ ತ್ಯಾಜ್ಯ ನಿರ್ವಹಣಾ ಘಟಕ ಸಹಕಾರಿಯಾಗಲಿದೆ. ಈ ಹಿಂದೆ ಯುಜಿಡಿ ಮುಖೇನ ಮಲತ್ಯಾಜ್ಯ ನದಿಗೆ ಸೇರದಂತೆ ಯೋಜನೆ ರೂಪಿಸಲಾಗಿತ್ತು. ಆದರೆ ಭಾಗಮಂಡಲ ವ್ಯಾಪ್ತಿಯಲ್ಲಿ ಬೀಳುವ ಹೆಚ್ಚಿನ ಮಳೆಯಿಂದಾಗಿ ಈ ಯೋಜನೆ ಯಶಸ್ವಿಯಾಗುವ ಸಾಧ್ಯತೆ ಕಡಿಮೆ ಇದ್ದುದರಿಂದ ಕೈಬಿಡಲಾಗಿತ್ತು. ಬಳಿಕ ಸಿಡಿಡಿ ಸಂಸ್ಥೆಯ ನೆರವಿನೊಂದಿಗೆ ಸರ್ಕಾರದ ಅನುದಾನ ಬಳಸಿ, ಅಂದಾಜು 41 ಲಕ್ಷ ರೂ. ವೆಚ್ಚದಲ್ಲಿ ಘಟಕ ನಿರ್ಮಾಣ ಮಾಡಲಾಗಿದೆ. ಕರ್ನಾಟಕ ರಾಜ್ಯದಲ್ಲಿಯೇ ಗ್ರಾಮೀಣ ಭಾಗದಲ್ಲಿ ಮಲ ತ್ಯಾಜ್ಯ ನಿರ್ವಹಣಾ ಘಟಕ (ಎಫ್‍ಎಸ್‍ಟಿಪಿ) ಸ್ಥಾಪಿಸಿದ ಹಿರಿಮೆ ಕೊಡಗು ಜಿಲ್ಲೆಗೆ ಸೇರಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಭಾಗಮಂಡಲ ಗ್ರಾ.ಪಂ.ವ್ಯಾಪ್ತಿಯ ಎಲ್ಲಾ ಮನೆಗಳಲ್ಲೂ ಕಡ್ಡಾಯವಾಗಿ ಸೆಪ್ಟಿಕ್ ಟ್ಯಾಂಕ್‍ಗಳು ನಿರ್ಮಾಣವಾಗಬೇಕು. ಆ ಮೂಲಕ ಮಲ ತ್ಯಾಜ್ಯವನ್ನು ವಾಹನ ಬಳಸಿ ಈ ಸಂಸ್ಕರಣಾ ಘಟಕಕ್ಕೆ ತಂದು ಸಂಸ್ಕರಣೆ ಮಾಡುವ ಕಾರ್ಯ ಯಶಸ್ವಿಯಾಗಿ ಆಗಬೇಕು ಎಂದು ಅವರು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭಂವರ್ ಸಿಂಗ್ ಮೀನಾ ಅವರು ಮಾತನಾಡಿ, ರಾಜ್ಯ ಮಾತ್ರವಲ್ಲದೆ ದೇಶದಲ್ಲಿನ ಹಲವು ಪ್ರಥಮಗಳಿಗೆ ಕೊಡಗು ಜಿಲ್ಲೆ ಸಾಕ್ಷಿಯಾಗಿದೆ. ಈ ಹಿಂದೆ ಆಗಸ್ಟ್ 15, 2021 ರಂದು ರಾಜ್ಯದಲ್ಲಿಯೇ ಒಡಿಎಫ್+1 ಘೋಷಿಸಿದ ಮೊದಲ ಜಿಲ್ಲೆ ಕೊಡಗು ಆಗಿತ್ತು ಎಂದು ಅವರು ತಿಳಿಸಿದರು.
ಪ್ರಸ್ತುತ ರಾಜ್ಯಕ್ಕೆ ಮಾದರಿಯಾಗುವಂತಹ ಗ್ರಾಮೀಣ ಭಾಗದ ಮಲ ತ್ಯಾಜ್ಯ ಸಂಸ್ಕರಣಾ ಘಟಕ ಉದ್ಘಾಟನೆಯಾಗಿರುವುದು ಹೆಮ್ಮೆಯ ಸಂಗತಿ. ಈ ಘಟಕ ನಿರ್ಮಾಣಕ್ಕೆ ಶಾಸಕರು, ಗ್ರಾ.ಪಂ.ಅಧ್ಯಕ್ಷರು ಮತ್ತು ಜನಪ್ರತಿನಿಧಿಗಳು ಅಗತ್ಯ ಸಹಕಾರ ನೀಡಿದ್ದಾರೆ. ಅಲ್ಲದೆ ಭಗಂಡೇಶ್ವರ ದೇವಾಲಯ ಸಮಿತಿಯವರು ಘಟಕ ನಿರ್ಮಾಣಕ್ಕೆ ಭೂಮಿ ಒದಗಿಸಿದ್ದಾರೆ ಎಂದು ನುಡಿದರು.
ಈ ಘಟಕವು ಪರಿಸರಕ್ಕೆ ಯಾವುದೇ ಮಾಲಿನ್ಯ ಉಂಟು ಮಾಡದೆ ವೈಜ್ಞಾನಿಕ ವಿಧಾನದಲ್ಲಿ ಮಲತ್ಯಾಜ್ಯ ಸಂಸ್ಕರಿಸಲಿದೆ. ಅಲ್ಲದೆ ಘಟಕ ನಿರ್ವಹಣೆ ಸಂಬಂಧ ಕೊಡಗು ಜಿ.ಪಂ. ಮತ್ತು ಗ್ರಾ.ಪಂ.ಜೊತೆ ಸಹಕರಿಸಲಿದೆ. ಈಗಾಗಲೇ ಸೋಮವಾರಪೇಟೆ ತಾಲೂಕಿನ ಸುಂಟಿಕೊಪ್ಪ ಗ್ರಾ.ಪಂ. ವ್ಯಾಪ್ತಿಯಲ್ಲಿ ಮತ್ತೊಂದು ಘಟಕ ನಿರ್ಮಾಣ ಶೀಘ್ರವೇ ಆರಂಭವಾಗಲಿದೆ. ಜಿಲ್ಲೆಯ ಪ್ರತಿ ತಾಲೂಕಿನಲ್ಲಿಯೂ ಒಂದು ಮಲತ್ಯಾಜ್ಯ ನಿರ್ವಹಣಾ ಘಟಕ ನಿರ್ಮಾಣ ಮಾಡುವ ಗುರಿ ಹೊಂದಲಾಗಿದೆ ಎಂದರು.
ಜಿ.ಪಂ.ಉಪ ಕಾರ್ಯದರ್ಶಿ ಪಿ.ಲಕ್ಷ್ಮಿ ಅವರು ಮಾತನಾಡಿ “ಮಲ ತ್ಯಾಜ್ಯ ಸಂಸ್ಕರಣಾ ಹಾಗೂ ವಿಲೇವಾರಿ ಘಟಕವನ್ನು ಮೊದಲು ಭಾಗಮಂಡಲದಲ್ಲಿ ಪ್ರಾರಂಭಿಸಲಾಗಿದ್ದು, ಸುಮಾರು 2.41 ಕೋಟಿ ಕ್ರಿಯಾ ಯೋಜನೆ ತಯಾರಿಸಿ ಅನುಮೋದನೆ ಪಡೆದುಕೊಳ್ಳಲಾಗಿದೆ. ಹಾಗೂ 1 ಕೋಟಿ ರೂ.ಗಳನ್ನು ಮಲತ್ಯಾಜ್ಯ ಸಂಸ್ಕಾರಣಾ ಹಾಗೂ ವಿಲೇವಾರಿ ಘಟಕದ ಕಾಮಗಾರಿಗಾಗಿ ಕೇಂದ್ರ ಪ್ರೋತ್ಸಾಹ ನಿಧಿಯಿಂದ ಬಿಡುಗಡೆ ಮಾಡಲಾಗಿದ್ದು, ನಿಯಮಾನುಸಾರ ಬಳಕೆ ಮಾಡಿ 2 ನೇ ಕಂತಿನ ಅನುದಾನಕ್ಕಾಗಿ ರಾಜ್ಯ ಕಚೇರಿಗೆ ಹಣಬಳಕೆ ಪ್ರಮಾಣ ಪತ್ರ ಸಲ್ಲಿಸಲಾಗಿದೆ ಎಂದರು.
ಗೊಬ್ಬರವಾಗಿ ಪರಿವರ್ತನೆ
ಸಾಮಾನ್ಯವಾಗಿ ಮನೆಗಳ, ಸಾರ್ವಜನಿಕ ಶೌಚಾಲಯಗಳ ಗುಂಡಿಗಳು ತುಂಬಿದ ತಕ್ಷಣವೇ ಸಕ್ಕಿಂಗ್ ಯಂತ್ರಗಳ ಮೂಲಕ ಮಲತ್ಯಾಜ್ಯವನ್ನು ಸಂಗ್ರಹಿಸಿ ಘಟಕಕ್ಕೆ ತಂದು ಸಂಸ್ಕರಣೆ ಮಾಡಿ ಗೊಬ್ಬರವನ್ನಾಗಿ ಪರಿವರ್ತಿಸಲಾಗುತ್ತದೆ. ಘಟಕದ ಮುಂಭಾಗದಲ್ಲಿ ಮನರೇಗಾ ಯೋಜನೆಯಡಿ ಪೌಷ್ಟಿಕ ಹಣ್ಣಿನ ತೋಟವನ್ನು ನಿರ್ಮಾಣ ಮಾಡಲಾಗಿದ್ದು, ಘಟಕದಲ್ಲಿ ಉತ್ಪತಿಯಾಗುವ ಗೊಬ್ಬರವನ್ನು ಈ ಪೌಷ್ಟಿಕ ಹಾಗೂ ಹಣ್ಣಿನ ತೋಟಕ್ಕೆ ಬಳಸಲಾಗುವುದು ಎಂದರು.
ಗ್ರಾ.ಪಂ.ಉಪಾಧ್ಯಕ್ಷ ಹೊಸೂರು ಸತೀಶ್ ಕುಮಾರ್ ಮಾತನಾಡಿ, ಎಫ್‍ಎಸ್‍ಟಿಪಿ ಘಟಕ ನಿರ್ಮಾಣ ಮಾಡಲು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಇದೇ ವೇಳೆ ಗ್ರಾಮ ವಿಕಸನ ಯೋಜನೆಯಡಿ ಕರ್ನಾಟಕ ಸರ್ಕಾರ ಮತ್ತು ಶಿಕ್ಷಣ ಫೌಂಡೇಷನ್ ಸಹಯೋಗದೊಂದಿಗೆ ವೀರಾಜಪೇಟೆ ಕ್ಷೇತ್ರದ ಗ್ರಾ.ಪಂ.ಗಳ ಉನ್ನತೀಕರಣಗೊಂಡ ಡಿಜಿಟಲ್ ಲೈಬ್ರರಿಗಳಿಗೆ ಟಿವಿ ಮತ್ತು ಮೊಬೈಲ್’ಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಭಾಗಮಂಡಲ ಗ್ರಾ.ಪಂ.ಅಧ್ಯಕ್ಷ ಸಿ.ಎಸ್. ಪೆಮಿತಾ ಮತ್ತು ಆಡಳಿತ ವರ್ಗ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಇಇ ಶ್ರೀಕಂಠಯ್ಯ, ಎಇಇ ಅಂಬೇಡ್ಕರ್, ಜಂಟಿ ಕೃಷಿ ನಿರ್ದೇಶಕರು ಮತ್ತು ಮಡಿಕೇರಿ ತಾ.ಪಂ.ಆಡಳಿತಾಧಿಕಾರಿ ಶಬಾನ ಎಂ.ಶೇಖ್, ತಾ.ಪಂ.ಇಒ ಶೇಖರ್, ಮನರೇಗಾ ಯೋಜನೆಯ ಸಹಾಯಕ ನಿರ್ದೇಶಕ ಹೇಮಂತ್, ಸ್ವಚ್ಛ ಭಾರತ್ ಮಿಷನ್ (ಗ್ರಾ) ಯೋಜನೆಯ ಸಂಯೋಜಕರು ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!