ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಮ್ಮು -ಕಾಶ್ಮೀರದ ಕುಪ್ವಾರಾ ಜಿಲ್ಲೆಯ ಕೇರನ್ ಪ್ರದೇಶದಲ್ಲಿ ನಡೆಯುತ್ತಿರುವ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು ಇಬ್ಬರು ಭಯೋತ್ಪಾದಕರನ್ನು ಹತ್ಯೆ ಮಾಡಿದ್ದಾರೆ. ಈ ಮಾಹಿತಿಯನ್ನು ಭಾರತೀಯ ಸೇನೆಯು ಎಕ್ಸ್ ಪೋಸ್ಟ್ ನಲ್ಲಿ ಹಂಚಿಕೊಂಡಿದೆ.
ಒಳನುಸುಳುವಿಕೆ ಪ್ರಯತ್ನದ ಕುರಿತು ಬಂದ ನಿರ್ದಿಷ್ಟ ಗುಪ್ತಚರ ಮಾಹಿತಿಯ ಆಧಾರದ ಮೇಲೆ ನಿನ್ನೆ ಕಾರ್ಯಾಚರಣೆ ಆರಂಭಗೊಂಡಿತು. ಅನುಮಾನಾಸ್ಪದ ಚಲನವಲನಗಳನ್ನು ಗಮನಿಸಿದ ಯೋಧರು ವ್ಯಕ್ತಿಗಳನ್ನು ಪ್ರಶ್ನಿಸಿದರು. ಆಗ ಭಯೋತ್ಪಾದಕರು ಒಂದೇ ಸಮನೆ ಗುಂಡು ಹಾರಿಸಲು ಪ್ರಯತ್ನಿಸಿದರು. ಪ್ರತಿದಾಳಿಯನ್ನು ಭದ್ರತಾ ಪಡೆ ಯೋಧರು ಮಾಡಿದಾಗ ಇಬ್ಬರು ಉಗ್ರರು ಹತರಾದರು ಎಂದು ಚಿನಾರ್ ಕಾರ್ಪ್ಸ್ ಎಕ್ಸ್ ಪೋಸ್ಟ್ ನಲ್ಲಿ ತಿಳಿಸಿದೆ.
ಮೊನ್ನೆ ಬುಧವಾರ ಮುಂಜಾನೆ ಕಿಶ್ತ್ವಾರ್ ಜಿಲ್ಲೆಯ ದೂರದ ಛಾತ್ರು ಪ್ರದೇಶದಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಎನ್‌ಕೌಂಟರ್ ನಡೆದ ಮೂರು ದಿನಗಳ ನಂತರ ಇದು ನಡೆದಿದೆ.
ಈ ಪ್ರದೇಶದಲ್ಲಿ ಭಯೋತ್ಪಾದಕರು ಇರುವ ಬಗ್ಗೆ ಭದ್ರತಾ ಸಂಸ್ಥೆಗಳು ನಿರ್ದಿಷ್ಟ ಗುಪ್ತಚರ ಮಾಹಿತಿಯನ್ನು ಪಡೆದ ನಂತರ ಅಧಿಕಾರಿಗಳು ಆಪರೇಷನ್ ಛಾತ್ರು ನ್ನು ಪ್ರಾರಂಭಿಸಿದರು. ಈ ಸುಳಿವಿನ ಮೇರೆಗೆ, ಭಾರತೀಯ ಸೇನೆಯ ವೈಟ್ ನೈಟ್ ಕಾರ್ಪ್ಸ್ ಮತ್ತು ಜಮ್ಮು- ಕಾಶ್ಮೀರ ಪೊಲೀಸರ ಜಂಟಿ ತಂಡಗಳು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದವು. ಸುಮಾರು ಇಬ್ಬರು ಅಥವಾ ಮೂವರು ಭಯೋತ್ಪಾದಕರು ಈ ಪ್ರದೇಶದಲ್ಲಿ ಅಡಗಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.

