ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಫ್ರಿಕಾದ ಕೆಲ ದೇಶಗಳಲ್ಲಿಕಾಣಿಸಿಕೊಂಡ ಮಂಕಿಪಾಕ್ಸ್ ಕಾಯಿಲೆ ಇದೀಗ 20ಕ್ಕೂ ಹೆಚ್ಚು ದೇಶಗಳಲ್ಲಿ ಹಬ್ಬಿದೆ. 300ಕ್ಕೂ ಹೆಚ್ಚು ಮಂಕಿಪಾಕ್ಸ್ ಪ್ರಕರಣಗಳು ದಾಖಲಾಗಿವೆ.ಈ ಹಿನ್ನೆಲೆ ವಿಶ್ವ ಆರೋಗ್ಯ ಸಂಸ್ಥೆ ಮಂಕಿಪಾಕ್ಸ್ ರೋಗದ ಬಗ್ಗೆ ಎಚ್ಚರಿಕೆ ಹೊರಡಿಸಿದ್ದು, ಪ್ರಕರಣಗಳ ಸಂಖ್ಯೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಿದೆ.
ಕೊರೋನಾ ಸೋಂಕಿಕ್ಕಿಂತ ಕಡಿಮೆ ವೇಗದಲ್ಲಿ ಮಂಕಿಪಾಕ್ಸ್ ಹರಡುತ್ತಿದೆ ಎಂದ ಜನರಿಗೆ ಡಬ್ಲ್ಯೂಎಚ್ಒ ಚಾಟಿ ಬೀಸಿದೆ. ಈಗ ಬೆಳಕಿಗೆ ಬಂದಿರುವ ಪ್ರಕರಣಗಳು ಟಿಪ್ ಆಫ್ ದ ಐಸ್ಬರ್ಗ್ ಅಷ್ಟೇ. ಈಗಲೇ ಎಚ್ಚೆತ್ತುಕೊಂಡು ಸರಿಯಾದ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಸೋಂಕು ಹರಡುವಿಕೆ ತೀರಾ ಹೆಚ್ಚಾಗಬಹುದು ಎಂದು ಅದು ಎಚ್ಚರಿಕೆ ನೀಡಿದೆ.
ಸ್ಮಾಲ್ ಪಾಕ್ಸ್ ಅಥವಾ ಸಿಡುಬಿಗೆ ಕಾರಣವಾಗುವ ವೈರಸ್ಗೆ ಹೋಲಿಸಿದರೆ ಮಂಕಿಪಾಕ್ಸ್ ವೈರಸ್ ತೀರಾ ಅಪಾಯಕಾರಿ ಅಲ್ಲ ಎಂಬುದು ಸದ್ಯದ ಮಾಹಿತಿ. ಆದರೆ ಇದು ವೇಗವಾಗಿ ಹರಡಬಲ್ಲುದು. ಎಚ್ಚರದಿಂದ ಇರಬೇಕಾದ ವಿಷಯ ಎಂದರೆ ಕೊರೋನಾವೈರಸ್ನಂತೆ ಮಂಕಿಪಾಕ್ಸ್ಗೂ ನಿರ್ದಿಷ್ಟ ಚಿಕಿತ್ಸೆ ಇಲ್ಲ. ಇಲ್ಲಿ ಸೋಂಕು ಬಂದ ನೂರು ಮಂದಿಯ ಪೈಕಿ 3ರಿಂದ 6 ಮಂದಿ ಸಾವನ್ನಪ್ಪುವುದು ತಿಳಿದುಬಂದಿದೆ. ಇದು ಬಿಟ್ಟರೆ ಸಾಮಾನ್ಯವಾಗಿ ಸೋಂಕಿತರು ಮೂರರಿಂದ ನಾಲ್ಕು ವಾರದೊಳಗೆ ಚೇತರಿಸಿಕೊಳ್ಳುತ್ತಾರೆ.
ವಿವಿಧ ದೇಶಗಳ ಮಾಹಿತಿ ಪ್ರಕಾರ, ಈಗ ಬೆಳಕಿಗೆ ಬಂದಿರುವ ಮಂಕಿಪಾಕ್ಸ್ ಸೋಂಕು ಪ್ರಕರಣಗಳಲ್ಲಿ ಪುರುಷ ಸಲಿಂಗಿಗಳಲ್ಲಿ ಹೆಚ್ಚು ಕಾಣಿಸಿಕೊಂಡಿರುವ ಕುತೂಹಲಕಾರಿ ಸಂಗತಿ ಬೆಳಕಿಗೆ ಬಂದಿದೆ. ಹಾಗೆಯೇ, ಹೆಚ್ಚಿನ ಪ್ರಕರಣಗಳು 40 ವರ್ಷ ವಯಸ್ಸಿನ ಕೆಳಗಿನ ಪುರುಷರದ್ದೇ ಆಗಿರುವುದು ಮತ್ತೊಂದು ಕುತೂಹಲಕಾರಿ ಸಂಗತಿ.
ರೋಗಲಕ್ಷಣಗಳೇನು?
ಮನುಷ್ಯರಲ್ಲಿ ಮಂಕಿಪಾಕ್ಸ್ ವೈರಸ್ ಸೋಂಕು ಇದ್ದರೆ ಜ್ವರ, ಮೈಕೈ ನೋವು, ಮಾಂಸಖಂಡ ನೋವು, ಚಳಿ ಇತ್ಯಾದಿ ಲಕ್ಷಣಗಳು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತವೆ. ಈಗ ಹವಾಮಾನ ಬದಲಾವಣೆ ಹಿನ್ನೆಲೆಯಲ್ಲಿಯೂ ಜ್ವರ ಮತ್ತು ಚಳಿ ಬರುತ್ತದೆ. ಹಾಗಂತ, ಈಗ ಜ್ವರ, ಚಳಿ ಆದರೆ ನಿರ್ಲಕ್ಷಿಸದೇ ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ಕೋವಿಡ್ನಂತೆ ಈ ಪ್ರಕರಣದಲ್ಲೂ ಸೋಂಕಿತರು ಪ್ರತ್ಯೇಕವಾಸ ಅಥವಾ ಐಸೊಲೇಶನ್ನಲ್ಲಿ ಇರುವುದು ಸರಿಯಾದ ಮುನ್ನೆಚ್ಚರಿಕೆ ಕ್ರಮ ಎನ್ನುತ್ತಾರೆ ತಜ್ಞರು.