ಹೊಸದಿಗಂತ ವರದಿ,ಬಾಗಲಕೋಟೆ:
ರಾಷ್ಟ್ರೀಯ ಸ್ವಯಂ ಸೇವಕ ಸಂಘ ಒಂದು ದೇಶಭಕ್ತರ ಸಂಸ್ಥೆ, ಸದಾ ದೇಶದ ಅಭಿವೃದ್ಧಿ ಬಗ್ಗೆ ಚಿಂತನೆ ಮಾಡುವ ಸಂಸ್ಥೆಯಾಗಿದೆ. ಸಂಘವನ್ನು ರಾಜಕೀಯ ದಾಳವಾಗಿ ಬಳಸಿಕೊಳ್ಳುತ್ತಿರುವ ಸಿದ್ಧರಾಮಯ್ಯನವರ ನಡೆಯನ್ನು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ತೀವ್ರವಾಗಿ ಖಂಡಿಸಿದರು.
ನವನಗರದ ಪತ್ರಿಕಾಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಸ್ವಯಂ ಸೇವಕ ಸಂಘದವರು ರಾಜಕಾರಣಿಗಲ್ಲ ಅವರು ದೇಶಭಕ್ತರು ಎಂದು ದೇಶದ 130 ಕೋಟಿ ಜನ ಹೇಳುತ್ತಾರೆ ಆದರೆ ಸಿದ್ಧರಾಮಯ್ಯನವರು ಮತಬ್ಯಾಂಕ್ಗಾಗಿ ಇಲ್ಲಸಲ್ಲದ ಆರೋಪಗಳನ್ನು ಸಂಘದ ಮೇಲೆ ಮಾಡುತ್ತಿರುವುದನ್ನು ಖಂಡಿಸಿದರು.
ದೇಶದಲ್ಲಿ ಬದುಕಿ ಹೋದ ಸಂತರು, ಶರಣರ ದೇಶದ ಜನರಿಗೋಸ್ಕರ ಒಳಿತನ್ನು ಮಾಡಿದ ರೀತಿಯಲ್ಲಿ ಆರ್ಎಸ್ಎಸ್ನವರು ದೇಶದ ಬಗ್ಗೆ ಚಿಂತನೆ ಮಾಡುತ್ತಾರೆ. ದೇಶದ ಅಭಿವೃದ್ಧಿಗೆ ಕೆಲಸ ಮಾಡುವ ಸಂಘವನ್ನು ರಾಜಕೀಕರಣಗೊಳಿಸುವ ಕಾರ್ಯವನ್ನು ಸಿದ್ಧರಾಮಯ್ಯನವರು ಮಾಡುತ್ತಿದ್ದು ಅವರಿಗೆ ಫಲ ಸಿಗುವುದಿಲ್ಲ ಎಂದು ಹೇಳಿದರು.
ರಾಜಕೀಯದಲ್ಲಿ ಮತಬ್ಯಾಂಕ್ ಮಾಡಿಕೊಳ್ಳಲು ಆರ್ ಎಸ್ ಎಸ್ ನವರು ರಾಜಕೀಯವಾಗಿ ಎಳೆದು ತರುತ್ತಿದ್ದಾರೆ. ಅವರ ಶ್ರಮ ವ್ಯರ್ಥವಾಗಲಿದೆ. ಸಿದ್ಧರಾಮಯ್ಯ ಬರೀ ರಾಜಕಾರಣ ಮಾಡುತ್ತಾರೆ. ದೇಶದ ಬಗ್ಗೆ ಏನಾದರೂ ಚಿಂತನೆ ಮಾಡುತ್ತಾರಾ ಎಂದು ಆರ್ಎಸ್ಎಸ್ ಬಗ್ಗೆ ಹಗುರವಾಗಿ ಮಾತನಾಡಿದ್ದ ಸಿದ್ಧರಾಮ್ಯನವರ ಹೇಳಿಕೆಗೆ ಕಾರಜೋಳ ತಿರುಗೇಟು ನೀಡಿದರು.