Monday, November 10, 2025

ಕಾಂಗ್ರೆಸ್ ವೋಟ್ ಚೋರಿ ಮಾಡಿ ಅಧಿಕಾರ ಅನುಭವಿಸಿದೆ; ನಾವು 7 ಕೋಟಿ ಸಹಿ ಸಂಗ್ರಹಿಸುತ್ತೇವೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ವೋಟ್ ಚೋರಿ ಆರೋಪಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಹಮ್ಮಿಕೊಂಡಿರುವ ಸಹಿ ಸಂಗ್ರಹ ಅಭಿಯಾನಕ್ಕೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ತೀವ್ರವಾಗಿ ಟೀಕಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಇಡೀ ದೇಶದಲ್ಲಿ ವೋಟ್ ಕಳವು ಮಾಡಿ ಅಧಿಕಾರ ಅನುಭವಿಸಿದವರು ಕಾಂಗ್ರೆಸ್‌ನವರೇ ಎಂದು ಗುಡುಗಿದರು.

ಸಹಿಗೆ ಸಹಿಯೇ ಸವಾಲು: ಕಾಂಗ್ರೆಸ್ ಒಂದು ಕೋಟಿ ಸಹಿ ಸಂಗ್ರಹ ಮಾಡಿದರೆ, ಅದರ ವಿರುದ್ಧವಾಗಿ ನಾವು ರಾಜ್ಯದ 7 ಕೋಟಿ ಜನರ ಸಹಿ ಸಂಗ್ರಹಿಸಿ ತಕ್ಕ ಪ್ರತ್ಯುತ್ತರ ನೀಡುತ್ತೇವೆ ಎಂದು ಅಶೋಕ್ ಟಕ್ಕರ್ ನೀಡಿದರು.

ಕಾನೂನು ಹೋರಾಟಕ್ಕೆ ಸವಾಲು: ರಾಹುಲ್ ಗಾಂಧಿ ಅವರು ಮಾಡಿರುವ ವೋಟ್ ಚೋರಿ ಆರೋಪಕ್ಕೆ ಇದುವರೆಗೂ ಒಂದೇ ಒಂದು ದಾಖಲೆಯನ್ನೂ ಕೊಟ್ಟಿಲ್ಲ. ರಾಹುಲ್ ಗಾಂಧಿ ಸುಮ್ಮನೆ ಒಂದು ಸ್ಕ್ರೀನ್ ತೋರಿಸಿ ಸುಳ್ಳು ಹೇಳುತ್ತಿದ್ದಾರೆ. ನಿಜವಾಗಿಯೂ ಕಾನೂನು ಉಲ್ಲಂಘನೆ ಆಗಿದ್ದರೆ, ಕೋರ್ಟ್‌ಗೆ ದೂರು ಕೊಡಲಿ. ಅಲ್ಲಿ ದೂರು ಕೊಟ್ಟರೆ, ಈ ಕಾಂಗ್ರೆಸ್ ಕಳ್ಳರೇ ಸಿಕ್ಕಿಹಾಕಿಕೊಳ್ಳುತ್ತಾರೆ ಎಂದು ವಿಪಕ್ಷ ನಾಯಕ ಸವಾಲೆಸೆದರು.

ಮಾಲೂರು ಪ್ರಕರಣದ ಉಲ್ಲೇಖ: ಮಾಲೂರಿನಲ್ಲಿ ಕಾಂಗ್ರೆಸ್‌ನವರೇ ವೋಟ್ ಚೋರಿ ಮಾಡಿ ಕೋರ್ಟ್‌ನಲ್ಲಿ ಛೀಮಾರಿ ಹಾಕಿಸಿಕೊಂಡಿದ್ದಾರೆ. ಆ ಕ್ಷೇತ್ರದ ಕಾಂಗ್ರೆಸ್ ಶಾಸಕರ ಸದಸ್ಯತ್ವ ಅಸಿಂಧುಗೊಂಡಿದೆ ಮತ್ತು ಸಂಬಂಧಿಸಿದ ಡಿಸಿ ವಿರುದ್ಧವೂ ಕ್ರಮ ಜರುಗಿದೆ. ಇಷ್ಟೆಲ್ಲಾ ವೋಟ್ ಚೋರಿ ಮಾಡಿದವರು ಕಾಂಗ್ರೆಸ್‌ನವರೇ ಎಂದು ಅವರು ಆಪಾದಿಸಿದರು.

ರಾಹುಲ್ ಗಾಂಧಿಗೆ ವಾಗ್ದಾಳಿ: ರಾಹುಲ್ ಗಾಂಧಿಯವರನ್ನು ಅಶೋಕ್ ಅವರು “ದೇಶದಲ್ಲಿನ ಬುದ್ಧಿಗೆಟ್ಟ ನಾಯಕ” ಎಂದು ಜರೆದರು. ಸೈನಿಕರಿಗೂ ರಿಸರ್ವೇಷನ್ (ಮೀಸಲಾತಿ) ಬೇಕು ಎಂಬ ಅವರ ಹೇಳಿಕೆಯನ್ನು ಉಲ್ಲೇಖಿಸಿ, “ಇವರು ಬುದ್ಧಿಹೀನರು, ನಾಚಿಕೆಗೇಡು, ಇವರಿಗೆ ಸ್ವಲ್ಪವೂ ಬುದ್ಧಿ ಇಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಡಿಕೆಶಿ, ಸಿದ್ದರಾಮಯ್ಯಗೆ ನೇರ ಸವಾಲು: ವೋಟ್ ಚೋರಿ ಬಗ್ಗೆ ಮಾತನಾಡುವ ನೈತಿಕತೆಯೇ ರಾಹುಲ್ ಗಾಂಧಿಗೆ ಇಲ್ಲ. ಮೊದಲು ಕೋಲಾರದಲ್ಲಿ ಆಗಿರುವ ವೋಟ್ ಚೋರಿ ಬಗ್ಗೆ ಮಾತನಾಡಲಿ. “ಧೈರ್ಯ ಇದ್ದರೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಗ್ಗೆ ಮಾತಾಡಲಿ” ಎಂದು ಆರ್. ಅಶೋಕ್ ನೇರ ಸವಾಲು ಎಸೆದಿದ್ದಾರೆ.

error: Content is protected !!