ಹೊಸದಿಗಂತ ವರದಿ, ಮಡಿಕೇರಿ:
ಇನ್ನೇನು ವರ ತಾಳಿ ಕಟ್ಟಬೇಕೆನ್ನುವಾಗ ತಾನು ಮದುವೆಯಾಗೋದಿಲ್ಲ ಎಂದು ವಧು ನಿರಾಕರಿಸುವುದನ್ನು ಸಾಮಾನ್ಯವಾಗಿ ಸಿನಿಮಾಗಳಲ್ಲಿ ನೋಡಿರುತ್ತೇವೆ. ಆದರೆ ಹಸೆಮಣೆ ಏರುವ ಸಂತಸದಲ್ಲಿದ್ದ ವರನೊಬ್ಬನಿಗೆ ಕೊನೆ ಕ್ಷಣದಲ್ಲಿ ವಧು ಕೈಕೊಟ್ಟ ಅಪರೂಪದ ಪ್ರಕರಣ ಸುಂಟಿಕೊಪ್ಪದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಆದರೆ ವಧು ಮದುವೆಗೆ ನಿರಾಕರಿಸಿದರೂ ವರ ಅದೇ ಮುಹೂರ್ತದಲ್ಲಿ ಮತ್ತೊಂದು ಹೆಣ್ಣಿನ ಕೈ ಹಿಡಿದಿದ್ದಾನೆ.
ಸುಂಟಿಕೊಪ್ಪ ಸಮೀಪದ ತೋಟದ ಮನೆಯೊಂದರಲ್ಲಿ ಜೂ. ಒಂದರಂದು ಯುವಕನ ಮದುವೆಯನ್ನು ಮಡಿಕೇರಿಯ ಯುವತಿಯೊಂದಿಗೆ ನಿಶ್ಚಯಿಸಲಾಗಿತ್ತು. ಜೂನ್ 5ರಂದು ಸುಂಟಿಕೊಪ್ಪದಲ್ಲಿ ಆರತಕ್ಷತೆಯನ್ನೂ ನಿಗದಿಪಡಿಸಲಾಗಿತ್ತು. ಆದರೆ, ಮದುವೆಗೆ ಎರಡು ದಿನ ಇರಬೇಕೆನ್ನುವಷ್ಟರಲ್ಲಿ ಯುವತಿ ಈ ಸಂಬಂಧವನ್ನು ನಿರಾಕರಿಸಿದ್ದಾಳೆ. ಯುವತಿಯ ಬದಲಾದ ಈ ದಿಡೀರ್ ನಿರ್ಧಾರದಿಂದಾಗಿ ಕುಟುಂಬಸ್ಥರು ದಿಕ್ಕು ತೋಚದಂತಾಗಿದ್ದು, ಯುವತಿಗೆ ಎಷ್ಟೇ ತಿಳಿ ಹೇಳಿದರೂ ತನ್ನ ಪಟ್ಟು ಬಿಡದ ಆಕೆ, ನಿಗದಿಯಾಗಿದ್ದ ಯುವಕನೊಂದಿಗೆ ಮದುವೆಗೆ ನಿರಾಕರಿಸಿದ್ದಾಳೆ.
ನಂತರ ಈ ಪ್ರಕರಣ ಸುಂಟಿಕೊಪ್ಪ ಪೊಲೀಸ್ ಠಾಣೆಯ ಮೆಟ್ಟಲೇರಿದ್ದು, ಈ ವೇಳೆ ರಾಜಿ ಪಂಚಾಯಿತಿ ನಡೆಸಲಾಗಿದೆ. ಅಲ್ಲಿಯೂ ಯುವತಿ ತಾನು ಆತನನ್ನು ಮದುವೆಯಾಗುವುದೇ ಇಲ್ಲ ಎಂದು ಪಟ್ಟು ಹಿಡಿದಿದ್ದಾಳೆ. ಬಳಿಕ ಈಗಾಗಲೇ ಮದುವೆಗಾಗಿ ಮಾಡಿದ್ದ ಸುಮಾರು 8 ಲಕ್ಷ ರೂ. ಹಣವನ್ನು ಹೆಣ್ಣಿನ ಮನೆಯವರು ವಾಪಸ್ ನೀಡಬೇಕು ಎಂದು ಒಪ್ಪಂದವಾಗಿದೆ.
ನಂತರ ಈಗಾಗಲೇ ಮದುವೆಗೆ ಸಿದ್ಧತೆ ನಡೆಸಿದ್ದ ಯುವಕನ ಕಡೆಯವರು ತಮಿಳುನಾಡಿನಲ್ಲಿರುವ ಸಂಬಂಧಿಕರೊಬ್ಬರ ಪುತ್ರಿಯನ್ನು ವಿವಾಹಕ್ಕೆ ಒಪ್ಪಿಸಿ, ಅದೇ ಮುಹೂರ್ತದಲ್ಲಿ ಮಡಿಕೇರಿಯ ದೇವಾಲಯವೊಂದರಲ್ಲಿ ವಿವಾಹ ಮಾಡಿಸಿದ್ದಾರೆ.