ಹೊಸ ದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರೀಯ ಸ್ವಯಂ ಸೇವಕ ಸಂಘವು (RSS) ಈಗ ನೂರನೇ ವರ್ಷದ ಸಂಭ್ರಮದಲ್ಲಿದ್ದು, ಈ ವೇಳೆ ಸಂಘ ಯಾಕೆ ನೋಂದಣಿಯಾಗಿಲ್ಲ ಎಂಬ ಪ್ರಶ್ನೆಗೆ ಸರಸಂಘ ಚಾಲಕ ಡಾ. ಮೋಹನ್ ಭಾಗವತ್ ಉತ್ತರ ನೀಡಿದ್ದಾರೆ.
ಹೊಸಕೆರೆಹಳ್ಳಿ ಖಾಸಗಿ ಕಾಲೇಜು ಸಭಾಂಗಣದಲ್ಲಿ ಡಾ ಮೋಹನ್ ಭಾಗವತ್ ಅವರೊಂದಿಗೆ ಸಂವಾದ ನಡೆಯಿತು. ಈ ಸಂದರ್ಭ ದೇಶದ ವಿವಿಧ ಭಾಗದಲ್ಲಿರುವ ಶಿಕ್ಷಣ, ಸಾಹಿತ್ಯ, ಸಂಸ್ಕೃತಿ ಕಲೆ ವಿಜ್ಞಾನ, ಆಡಳಿತ, ಪತ್ರಿಕೋದ್ಯಮ, ಕ್ರೀಡೆ, ಉದ್ಯಮ, ಸಾಮಾಜಿಕ ಸೇವೆ, ಆಧ್ಯಾತ್ಮ ಸೇರಿದಂತೆ ಬಹುತೇಕ ಕ್ಷೇತ್ರದ1200 ಗಣ್ಯರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು.
ಸಾಕಷ್ಟು ಬಾರಿ ಈ ಪ್ರಶ್ನೆಯನ್ನು ಕೇಳಲಾಗಿದ್ದು, ನಾವು ಉತ್ತರ ನೀಡಿದ್ದೇವೆ. ಆರ್‌ಎಸ್‌ಎಸ್ 1925ರಲ್ಲಿ ಸ್ಥಾಪನೆಯಾಯಿತು. ಆಗ ಭಾರತವನ್ನು ಬ್ರಿಟೀಷರು ಆಳುತ್ತಿದ್ದರು. ನಾವು ಬ್ರಿಟೀಷ್ ಸರ್ಕಾರದಲ್ಲಿ ನೋಂದಾಯಿಸಿಕೊಳ್ಳಬೇಕಿತ್ತು ಎಂದು ನೀವು ನಿರೀಕ್ಷಿಸುತ್ತೀರಾ?’ ಎಂದು ಭಾಗವತ್ ಕೇಳಿದರು.
ನಮ್ಮ ಹೋರಾಟ ಬ್ರಿಟೀಷರ ವಿರುದ್ಧ ಇತ್ತು. ದೇಶಕ್ಕೆ ಸ್ವಾತಂತ್ರ‍್ಯ ಬಂದ ನಂತರ, ಸಂಘಗಳನ್ನು ನೋಂದಣಿ ಮಾಡಬೇಕೆಂದು ಭಾರತ ಸರ್ಕಾರ ಕಡ್ಡಾಯಗೊಳಿಸಲಿಲ್ಲ. ನಮ್ಮನ್ನು ಸಾಮಾನ್ಯ ನಂಬಿಕೆಗಳನ್ನು ಹಂಚಿಕೊಳ್ಳುವ ಮತ್ತು ಸ್ವಯಂಪ್ರೇರಣೆಯಿಂದ ಒಟ್ಟಾಗಿ ಕೆಲಸ ಮಾಡುವ ಜನರ ಗುಂಪು ಎಂದು ವರ್ಗೀಕರಿಸಲಾಗಿದೆ ಮತ್ತು ನಮ್ಮದು ಮಾನ್ಯತೆ ಪಡೆದ ಸಂಸ್ಥೆ ಎಂದು ವಿವರಿಸಿದರು.
ಆದಾಯ ತೆರಿಗೆ ಇಲಾಖೆ ಮತ್ತು ನ್ಯಾಯಾಲಯಗಳು, ಒಂದು ಸಾಮಾನ್ಯ ಉದ್ದೇಶಕ್ಕಾಗಿ ಒಟ್ಟುಗೂಡುವ ಆದರೆ ಔಪಚಾರಿಕವಾಗಿ ಕಂಪನಿ, ಟ್ರಸ್ಟ್ ಅಥವಾ ಸಮಾಜವಾಗಿ ನೋಂದಾಯಿಸದ ಜನರ ಗುಂಪು ಎಂದಿದೆ. ಈ ವರ್ಗೀಕರಣದಿಂದಾಗಿ, ಆರ್‌ಎಸ್‌ಎಸ್‌ಗೆ ಆದಾಯ ತೆರಿಗೆ ಪಾವತಿಸುವುದರಿಂದ ವಿನಾಯಿತಿ ನೀಡಲಾಗಿದೆ ಎಂದರು.
ಭಾರತದ ಇತಿಹಾಸದಲ್ಲಿ ಆರ್‌ಎಸ್‌ಎಸ್ ಅನ್ನು ಮೂರು ಬಾರಿ (1948 ರಲ್ಲಿ ಗಾಂಧಿಯವರ ಹತ್ಯೆಯ ನಂತರ, 1975 ರಲ್ಲಿ ತುರ್ತು ಪರಿಸ್ಥಿತಿಯ ಸಮಯದಲ್ಲಿ ಮತ್ತು 1992 ರಲ್ಲಿ ಬಾಬರಿ ಮಸೀದಿ ಧ್ವಂಸದ ನಂತರ) ನಿಷೇಧಿಸಲಾಗಿದೆ. ಆದರೆ, ಕೋರ್ಟ್ ಈ ನಿಷೇಧವನ್ನು ತಿರಸ್ಕರಿಸಿದೆ. ಬಳಿಕ ಸರ್ಕಾರವು ಆರ್‌ಎಸ್‌ಎಸ್ ಅನ್ನು ನಿಜವಾದ ಮತ್ತು ಮಹತ್ವದ ಸಂಘಟನೆ ಎಂದು ಗುರುತಿಸಿದೆ. ನಾವು ಅಲ್ಲಿ ಇಲ್ಲದಿದ್ದರೆ, ಅವರು ಯಾರನ್ನು ನಿಷೇಧಿಸಿದರು? ಎಂದು ಪ್ರತಿಕ್ರಿಯಿಸಿದರು.

