ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ಸ್ಥಗಿತವಾಗಿದ್ದ ಭಾರತ-ಬಾಂಗ್ಲಾದೇಶ ನಡುವಿನ ಬಸ್ ಸೇವೆ ಎರಡು ವರ್ಷಗಳ ಬಳಿಕ ಇಂದು ಮತ್ತೆ ಪುನರಾರಂಭಗೊಂಡಿದೆ. ಐಸಿಪಿ ಅಗರ್ತಲಾ-ಅಖೌರಾ ಮತ್ತು ಐಸಿಪಿ ಹರಿದಾಸ್ಪುರ್-ಬೆನಾಪೋಲ್ ಮೂಲಕ ಭಾರತ-ಬಾಂಗ್ಲಾದೇಶದ ಬಸ್ ಸೇವೆಗೆ ಇಂದು ಮುಂಜಾನೆ ಹಸಿರು ನಿಶಾನೆ ಸಿಕ್ಕಿದೆ. “ಕೈಗೆಟಕುವ ದರದಲ್ಲಿ, ಜನ-ಕೇಂದ್ರಿತ ಸಂಪರ್ಕವನ್ನು ಹೆಚ್ಚಿಸುವಲ್ಲಿ ಮುಂದಕ್ಕೆ ಹೆಜ್ಜೆ ಹಾಕಿ” ಎಂದು ಬಾಂಗ್ಲಾದೇಶದಲ್ಲಿರುವ ಭಾರತದ ಹೈಕಮಿಷನ್ ಟ್ವೀಟ್ ಮಾಡಿದೆ.
ಬಾಂಗ್ಲಾದೇಶ ರಸ್ತೆ ಸಾರಿಗೆ ನಿಗಮದ (ಬಿಆರ್ಟಿಸಿ) ಅಧ್ಯಕ್ಷ ತಾಜುಲ್ ಇಸ್ಲಾಂ ಬಸ್ ಸೇವೆ ಪುನರಾರಂಭವಾದ ಬಗ್ಗೆ ಮಾಹಿತಿ ನೀಡಿದ್ದಾರೆ.
ಮೇ 29 ರಂದು ಉಭಯ ದೇಶಗಳ ನಡುವಿನ ರೈಲು ಸೇವೆ ಪುನರಾರಂಭಗೊಂಡ ನಂತರ ಈ ಬೆಳವಣಿಗೆಯಾಗಿದೆ. COVID-19 ಸಾಂಕ್ರಾಮಿಕದ ದೃಷ್ಟಿಯಿಂದ ಮಾರ್ಚ್ 2020 ರಿಂದ ಎರಡು ದೇಶಗಳ ನಡುವಿನ ರೈಲು ಸೇವೆ ಹಾಗೂ ಬಸ್ ಸೇವೆ ಎರಡನ್ನೂ ಸ್ಥಗಿತಗೊಳಿಸಲಾಗಿತ್ತು. ಭಾರತ ಮತ್ತು ಬಾಂಗ್ಲಾದೇಶದ ನಡುವೆ ಬಂಧನ್ ಮತ್ತು ಮೈತ್ರಿ ಎಕ್ಸ್ಪ್ರೆಸ್ ಕಾರ್ಯನಿರ್ವಹಿಸುತ್ತವೆ.
ಢಾಕಾ, ಸಿಲ್ಹೆತ್, ಶಿಲ್ಲಾಂಗ್, ಗುವಾಹಟಿ ಮಾರ್ಗವನ್ನು ಹೊರತುಪಡಿಸಿ, ಇತರ ನಾಲ್ಕು ಮಾರ್ಗಗಳಲ್ಲಿ ಶುಕ್ರವಾರದಿಂದ ಸೇವೆ ಪುನರಾರಂಭವಾಗುತ್ತದೆ ಮತ್ತು ಮೊದಲ ಬಸ್ ಮೋತಿಝೀಲ್ನಿಂದ ಬೆಳಿಗ್ಗೆ 7:00 ಗಂಟೆಗೆ ಪ್ರಾರಂಭವಾಗುತ್ತದೆ ಎಂದು ಇಸ್ಲಾಂ ತಿಳಿಸಿದ್ದಾರೆ.