ಹೊಸದಿಗಂತ ವರದಿ ಸೋಮವಾರಪೇಟೆ:
ಚನ್ನರಾಯಪಟ್ಟಣ-ಮಡಿಕೇರಿ-ವೀರಾಜಪೇಟೆ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೆ ಏರಿಸಲಾಗುವುದು ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಆವರು ಭರವಸೆ ನೀಡಿದ್ದಾರೆ.
ಮಡಿಕೇರಿ ಹೊರ ವಲಯದ ತಾಜ್ ವಿವಾಂಟ ರೆಸಾರ್ಟ್’ನಲ್ಲಿ ತಂಗಿರುವ ಸಚಿವರನ್ನು ಭೇಟಿ ಮಾಡಿದ ಮಡಿಕೇರಿ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅವರು ಈ ಸಂಬಂಧ ಮನವಿ ಸಲ್ಲಿಸಿದರು.
ಚೆನ್ನರಾಯಪಟ್ಟಣ-ಸೋಮವಾರಪೇಟೆ-ಮಡಿಕೇರಿ ವೀರಾಜಪೇಟೆ ರಸ್ತೆಯನ್ನು ಮೇಲ್ದರ್ಜೆಗೆ ಏರಿಸಿ ದ್ವಿಪಥ ರಸ್ತೆಯನ್ನಾಗಿ ಮಾರ್ಪಾಡು ಮಾಡುವಂತೆ ಶಾಸಕರು ಸಲ್ಲಿಸಿದ ಮನವಿಗೆ ಸ್ಪಂದಿಸಿದ ಕೇಂದ್ರ ಸಚಿವರು, ಈ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗು ಮಾರ್ಪಡಿಸಲಾಗುವುದು ಎಂದು ತಿಳಿಸಿದರು.
ಅಲ್ಲದೆ ಕೊಡಗು ಪ್ರವಾಸೋದ್ಯಮ ಜಿಲ್ಲೆಯಾಗಿ ಗುರುತಿಸಿಕೊಂಡಿರುವುದರಿಂದ ಪ್ರವಾಸೋದ್ಯಮದ ಅಭಿವೃದ್ಧಿಗಾಗಿ ಕೇಬಲ್ ಕಾರ್ ನೀಡಲು ಅವಕಾಶವಿದ್ದು,ಕೂಡಲೇ ಅಂದಾಜು ಪಟ್ಟಿ ಸಲ್ಲಿಸಿದಲ್ಲಿ ಕೇಬಲ್ ಕಾರು ಮಂಜೂರು ಮಾಡುವುದಾಗಿಯೂ ನಿತಿನ್ ಗಡ್ಕರಿ ಹೇಳಿದರು.