Monday, November 10, 2025

ಆಟವಾಡುತ್ತಿದ್ದಾಗ ಕೆರೆಯಲ್ಲಿ ಮುಳುಗಿ ಇಬ್ಬರು ಬಾಲಕರು ದಾರುಣ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಆಟವಾಡುತ್ತಿದ್ದಾಗ ಕೆರೆಯ ಬಳಿ ಹೋಗಿದ್ದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ಬೆಂಗಳೂರು ಹೊರವಲಯದಲ್ಲಿ ನಡೆದಿದೆ.

ಬೆಂಗಳೂರು ಹೊರವಲಯದ ಅತ್ತಿಬೆಲೆ ಸಮೀಪದ ಬಳ್ಳೂರು ಗ್ರಾಮದ ಕೆರೆಯಲ್ಲಿ ಈ ದುರಂತ ನಡೆದಿದ್ದು, ಮೃತ ಬಾಲಕರನ್ನು ಅನಿಕೇತ್ ಕುಮಾರ್ (8) ಹಾಗೂ ರೆಹಮಾತ್ ಬಾಬಾ (11) ಎಂದು ಗುರುತಿಸಲಾಗಿದೆ.

ಬಾಲಕ ಅನಿಕೇತ್ ಕುಮಾರ್ ಪೋಷಕರು ಬಿಹಾರ ಮೂಲದವರಾಗಿದ್ದು, ರೆಹಮಾತ್ ಬಾಬಾ ಪೋಷಕರು ಆಂಧ್ರ ಮೂಲದ ಕದಿರಿ ಮೂಲದವರು ಎಂದು ಹೇಳಲಾಗುತ್ತಿದೆ.

ಮೃತ ಬಾಲಕರು ಪೋಷಕರು ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ನಿನ್ನೆ ಸಂಜೆ ಇಬ್ಬರೂ ಕೂಡ ಮನೆಯ ಹತ್ತಿರವೇ ಆಟ ಆಡಿಕೊಂಡಿದ್ದರು. ಆದರೆ, ಆಟ ಆಡುತ್ತಾ ಇಬ್ಬರೂ ಕೆರೆಯ ಬಳಿ ಬಂದಿದ್ದು, ಈ ಸಮಯದಲ್ಲಿ ನೀರನ್ನು ನೋಡಿ ಕೆರೆಗೆ ಇಳಿದಿದ್ದಾರೆ. ಆದರೆ, ಈಜು ಬರದ ಕಾರಣ, ಇಬ್ಬರೂ ಮುಳುಗಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಏತನ್ಮಧ್ಯೆ ಪೋಷಕರು ಮಕ್ಕಳು ಆಟ ಆಡಿಕೊಂಡು ಸುತ್ತ-ಮುತ್ತಲೇ ಇದ್ದಾರೆ ಎಂದು ಭಾವಿಸಿದ್ದರು. ಆದರೆ ಸಂಜೆ ಆದರೂ ಮಕ್ಕಳು ಮನೆಗೆ ಹಿಂತಿರುಗಿ ಬರದೇ ಹಿನ್ನೆಲೆಯಲ್ಲಿ ಆತಂಕಗೊಂಡಿದ್ದಾರೆ. ಬಳಿಕ ಮನೆಯ ಸುತ್ತಮುತ್ತ ಹಾಗೂ ಊರಿನಲ್ಲಿ ಹುಡುಕಾಡಿದ್ದಾರೆ. ಆದರೆ ಎಷ್ಟೇ ಹೊತ್ತಾದರೂ ಮಕ್ಕಳ ಸುಳಿವು ಸಿಕ್ಕಿಲ್ಲ. ಆದರೆ ಇಂದು ಬೆಳಗ್ಗೆ ಕೆರೆಯಲ್ಲಿ ಮಕ್ಕಳ ದೇಹ ತೆಲುತ್ತಿರುವುದು ಪತ್ತೆ ಆಗಿದ್ದು, ತಕ್ಷಣವೇ ಗ್ರಾಮಸ್ಥರು ಅತ್ತಿಬೆಲೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಈ ಸಂಬಂಧ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಸಾವಿನ ಪ್ರಕರಣ ದಾಖಲಾಗಿದೆ.

error: Content is protected !!