ಅರಾಜಕತೆಗೆ ಇನ್ನೊಂದು ಹೆಸರೇ ತಾಲಿಬಾನ್;‌ ಬೀದಿ ಬದಿ ಮಾರಾಟಗಾರನಾದ ಟಾಪ್ ಟಿವಿ ಆಂಕರ್..

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಅರಾಜಕತೆಗೆ ಇನ್ನೋಂದು ಹೆಸರಾಗಿ ಅಪಘಾನಿಸ್ಥಾನ ಕುಖ್ಯಾತಿ ಗಳಿಸುತ್ತಿದೆ. ಸುಂದರ ದೇಶ ಅಘಾನಿಸ್ಥಾನ ಉಗ್ರರ ಕಪಿಮುಷ್ಠಿಯೊಳಕ್ಕೆ ಸಿಲುಕಿ ನರಳಾಡುತ್ತಿದೆ. ಉಗ್ರರ ದೇಶವಾಗುವುದಕ್ಕಿಂತ ಮುನ್ನ ನೆಮ್ಮದಿ ಜೀವನ ಕಟ್ಟಿಕೊಂಡಿದ್ದ ಜನರು ಈಗ ಒಪ್ಪೊತ್ತಿನ ಊಟಕ್ಕೂ ಪರದಾಡುವಂತಾಗಿದೆ. ತಾಲಿಬಾನಿಗಳ ದರ್ಪ ದೌರ್ಜನ್ಯ ಕರ್ಮಠ ಶರಿಯತ್ ಕಾನೂನುಗಳಿಂದ ಬಂಧಿಯಾಗಿರುವ ಹೆಣ್ಣುಮಕ್ಕಳದ್ದು ಒಂದು ರೀತಿಯ ಗೋಳಿನ ಕಥೆಯಾದರೆ, ಉನ್ನತ ಆದರ್ಶಗಳೊಂದಿಗೆ ಜೀವನ ಕಟ್ಟಿಕೊಂಡಿದ್ದ ಪುರುಷರ ಕಣ್ಣೀರಿನ ಕಥೆಗಳು ಒಂದೊಂದಾಗಿ ಹೊರಬೀಳುತ್ತಿದೆ.
ಕಳೆದ ವರ್ಷ ಆಗಸ್ಟ್‌ನಲ್ಲಿ ತಾಲಿಬಾನ್ ಅಧಿಕಾರಕ್ಕೆ ಮರಳಿದ ನಂತರ ಯುದ್ಧ-ಹಾನಿಗೊಳಗಾಗಿ ತತ್ತರಿಸಿದ್ದ ಅಫ್ಘಾನಿಸ್ತಾನ ಇದೀಗ ಮತ್ತಷ್ಟು ಅಂಧಕಾರದಲ್ಲಿ ಮುಳುಗೇಳುತ್ತಿದೆ. ತಾಲೀಬಾನಿಗಳಿಂದ ಉದ್ಯೋಗ ಕಳೆದುಕೊಂಡ ಅಫ್ಘಾನಿಸ್ತಾನದ ಟಾಪ್ ಟೆಲಿವಿಷನ್ ಆಂಕರ್ ಒಬ್ಬ  ಜೀವನೋಪಾಯಕ್ಕಾಗಿ ಹಾಗೂ ಅನಾರೋಗ್ಯ ಪೀಡಿತ ತಾಯಿಯ ಆರೈಕೆಗಾಗಿ ಬೀದಿ ಬದಿಯಲ್ಲಿ ಆಹಾರ ಮಾರಾಟ ಮಾಡುವ ಪರಿಸ್ಥಿತಿ ತಲುಪಿದ್ದಾನೆ.
ʼತಾಲಿಬಾನ್ ಆಡಳಿತದಡಿ ಅಫ್ಘಾನಿಸ್ತಾನದಲ್ಲಿ ಪತ್ರಕರ್ತರ ಜೀವನʼ ಎಂದು ಕಾಬೂಲ್ ವಿಶ್ವವಿದ್ಯಾಲಯದ ಉಪನ್ಯಾಸಕ ಕಬೀರ್ ಹಕ್ಮಲ್ ಹಂಚಿಕೊಂಡಿರುವ ಟ್ವೀಟ್ ನಿಂದ ಈ ವಿಚಾರ ಬೆಳಕಿಗೆ ಬಂದಿದೆ. “ವಿವಿಧ ಟಿವಿ ಚಾನೆಲ್‌ಗಳಲ್ಲಿ ನಿರೂಪಕರಾಗಿ ಮತ್ತು ವರದಿಗಾರರಾಗಿ ಹಲವಾರು ವರ್ಷಗಳ ಕಾಲ ಕೆಲಸ ಮಾಡಿರುವ ಮೂಸಾ ಮೊಹಮ್ಮದಿ ಯನ್ನು ಕೆಲಸದಿಂದ ಕಿತ್ತೊಗೆಯಲಾಗಿದೆ. ಕುಟುಂಬವನ್ನು ಪೋಷಿಸಲು ಯಾವುದೇ ಆದಾಯವಿಲ್ಲದ ಅಹ್ಮದಿ ಹಣವನ್ನು ಗಳಿಸಲು ಬೀದಿ ಬದಿ ಆಹಾರವನ್ನು ಮಾರಾಟ ಮಾಡುತ್ತಾರೆ. ಗಣರಾಜ್ಯದ ಪತನದ ನಂತರ ಆಫ್ಘನ್ನರು ಅನುಭವಿಸುತ್ತಿರುವ ಕಿತ್ತುತಿನ್ನುವ ಬಡತನಕ್ಕೆ ಇದಕ್ಕಿಂದ ಉತ್ತಮ ಉದಾಹರಣೆ ಬೇಕೆ ಎಂದು ಕಬೀರ್ ಟ್ವಿಟ್‌ ಮಾಡಿದ್ದಾರೆ.

ಅಫ್ಘಾನಿಸ್ತಾನವನ್ನು ತಾಲಿಬಾನ್ ಸ್ವಾಧೀನಪಡಿಸಿಕೊಂಡ ನಂತರ ವಿದ್ಯಾರ್ಥಿನಿಯರು, ಮಹಿಳಾ ವೃತ್ತಿಪರರು ಮತ್ತು ಪತ್ರಕರ್ತರ ಸ್ವಾತಂತ್ರ್ಯವನ್ನು ತೀವ್ರವಾಗಿ ಮೊಟಕುಗೊಳಿಸಲಾಗಿದೆ. ಮೂಸಾ ಮೊಹಮ್ಮದಿ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅವರ ಆರೋಗ್ಯಕ್ಕೆ ಹಣ ಸಂಪಾದಿಸಲು ಅಹ್ಮದಿಗೆ ಬೇರಾವುದೇ ಮಾರ್ಗ ಉಳಿದಿಲ್ಲ. ತಾಲೀಬಾನಿಗಳು ಪ್ರತಿಭಾವಂತ ನಿರೂಪಕನ ಜೀವನವನ್ನು ಅಧೋಗತಿಗೆ ಇಳಿಸಿದ್ದಾರೆ.
ಈ ಟ್ವಿಟ್‌ ವೈರಲ್‌ ಆಗುತ್ತಿದೆ ಜನರು ಮೂಸಾ ಮೊಹಮ್ಮದಿ ಅವರ ಕರುಣಾಜನಕ ಕಥೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಿದ್ದಾರೆ ಮತ್ತು ತಾಲಿಬಾನ್ ಆಡಳಿತದಲ್ಲಿ ಅಫ್ಘಾನ್ ದುಸ್ಥಿತಿಯ ಬಗ್ಗೆ ಸಂದೇಶಗಳನ್ನು ಹಂಚಿಕೊಳ್ಳುತ್ತಿದ್ದಾರೆ.  ಮೊಹಮ್ಮದಿಯ ಅವಸ್ಥೆಯು ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ಕನಲಿಸಿದೆ.
ಅಪ್ಘಾನಿಸ್ಥಾನದ ರಾಜಕೀಯ ಕ್ರಾಂತಿಯು ದೇಶಕ್ಕೆ ಅಂತಾರಾಷ್ಟ್ರೀಯವಾಗಿ ಏಕಾಂಗಿಯಾಗಿಸಿದೆ. ದೇಶದ ಬ್ಯಾಂಕಿಂಗ್ ವ್ಯವಸ್ಥೆಯ ಮೇಲೆ ಒತ್ತಡ ಹೇರಿದೆ, ಸಾರ್ವಜನಿಕ ಹಣಕಾಸು ಕುಸಿತಕ್ಕೆ ಕಾರಣವಾಗಿದೆ. ಕರೋನವೈರಸ್ ಬಿಕ್ಕಟ್ಟು ಮತ್ತು ಭೀಕರ ಬರಗಾಲದ ವಿರುದ್ಧವೂ ಜನರು ಹೋರಾಡುತ್ತಿದ್ದಾರೆ.
ಯುನೈಟೆಡ್ ನೇಷನ್ಸ್ ಡೆವಲಪ್‌ಮೆಂಟ್ ಪ್ರೋಗ್ರಾಂ (ಯುಎನ್‌ಡಿಪಿ) 2022 ರ ಮಧ್ಯಾಂತರದ ವೇಳೆಗೆ ಆಫ್ಘನ್ ಜನಸಂಖ್ಯೆಯ 97 ಪ್ರತಿಶತದಷ್ಟು ಜನರು ಬಡತನದ ಕೂಪಕ್ಕೆ ಬೀಳಲಿದ್ದಾರೆ ಎಂದು ಅಂದಾಜಿಸಿದೆ.
“ಅಫ್ಘಾನಿಸ್ತಾನ ಸಾರ್ವತ್ರಿಕ ಬಡತನದ ಅಂಚಿನಲ್ಲಿದೆ” ಎಂದು ಯುಎನ್‌ಡಿಪಿ ಸೆಪ್ಟೆಂಬರ್‌ನಲ್ಲಿ ಹೇಳಿತ್ತು. “ದೇಶದ ರಾಜಕೀಯ ಮತ್ತು ಆರ್ಥಿಕ ಬಿಕ್ಕಟ್ಟುಗಳಿಗೆ ತುರ್ತಾಗಿ ಪ್ರತಿಕ್ರಿಯೆಯನ್ನು ಪ್ರಾರಂಭಿಸದ ಹೊರತು ಜನಸಂಖ್ಯೆಯ 97 ಪ್ರತಿಶತದಷ್ಟು ಜನರು ಬಡತನ ರೇಖೆಯ ಕೆಳಗೆ ಮುಳುಗುವ ಅಪಾಯದಲ್ಲಿದ್ದಾರೆ ಎಂದು ವರದಿ ಹೇಳಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!