ಹೊಸದಿಗಂತ ವರದಿ, ಗೋಣಿಕೊಪ್ಪ:
ಭ್ರಷ್ಟ ಅಧಿಕಾರಿಗಳ ವಿರುದ್ದ ಶುಕ್ರವಾರ ನಡೆದ ಎಸಿಬಿ ದಾಳಿಯ ಸಂದರ್ಭ ಪೊನ್ನಂಪೇಟೆ ಪಂಚಾಯತ್ ರಾಜ್ ಉಪವಿಭಾಗದ ಸಹಾಯಕ ಅಭಿಯಂತರರೂ ಬಲೆಗೆ ಬಿದ್ದಿದ್ದಾರೆ.
ಪೊನ್ನಂಪೇಟೆ ಪಂಚಾಯತ್ ರಾಜ್ ಉಪವಿಭಾಗದ ಸಹಾಯಕ ಅಭಿಯಂತರರಾದ ಓಬಯ್ಯ ಅವರೇ ಎಸಿಬಿ ದಾಳಿಗೆ ಬಲೆಗೆ ಬಿದ್ದವರು.
ಶುಕ್ರವಾರ ರಾಜ್ಯಾದ್ಯಂತ ಏಕಕಾಲದಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ ಸಂದರ್ಭ ಓಬಯ್ಯ ಅವರ ಹುಣಸೂರಿನಲ್ಲಿರುವ ಮನೆ ಹಾಗೂ ಪೊನ್ನಂಪೇಟೆಯ ಅವರ ಕಚೇರಿಗೂ ದಾಳಿ ನಡೆಸಿ ಕಡತಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.
ಓಬಯ್ಯ ಅವರು ಹುಣಸೂರಿನಲ್ಲಿ ತಮ್ಮ ಮನೆಯಲ್ಲಿದ್ದ ಸಂದರ್ಭ ಅಧಿಕಾರಿಗಳು ದಾಳಿ ನಡೆಸಿ ಮನೆಯ ಸಂಪೂರ್ಣ ತಪಾಸಣೆ ಮಾಡಿದ್ದಾರೆ.
ಎ.ಸಿ.ಬಿ. ಅಧಿಕಾರಿಗಳಾದ ಚಿತ್ತರಂಜನ್ ದಾಸ್ ಹಾಗೂ ಇತರ ಎಂಟು ಜನರ ತಂಡ ಪೊನ್ನಂಪೇಟೆಗೆ ಆಗಮಿಸಿ ಪಂಚಾಯತ್ ರಾಜ್ ಉಪವಿಭಾಗದ ಕಚೇರಿಯನ್ನು ಸಂಪೂರ್ಣ ಸ್ಥಗಿತಗೊಳಿಸಿ ಕಡತಗಳ ಪೂರ್ಣ ತಪಾಸಣೆಯಲ್ಲಿ ತೊಡಗಿದ್ದರು.
ಕಳೆದ ಎಂಟು ವರ್ಷಗಳಿಂದ ಪೊನ್ನಂಪೇಟೆ ಪಂಚಾಯತ್ ರಾಜ್ ಉಪವಿಭಾಗ ಸಹಾಯಕ ಅಭಿಯಂತರರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಓಬಯ್ಯ ಅವರ ಭ್ರಷ್ಟಾಚಾರದ ವಿರುದ್ಧ ಲೋಕಾಯುಕ್ತ ಹಾಗೂ ಎಸಿಬಿಗೆ ಸಾರ್ವಜನಿಕರು ದೂರು ಸಲ್ಲಿಸಿದ್ದರು.
ಈ ಹಿನ್ನೆಲೆಯಲ್ಲಿ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ಸಂಜೆಯವರೆಗೂ ಕಡತಗಳ ಪರಿಶೀಲನೆಯಲ್ಲಿ ತೊಡಗಿದ್ದರು.