ರಕ್ತಸಿಕ್ತ ಇಥಿಯೋಪಿಯಾ, ಬಂಡುಕೋರರ ದಾಳಿಗೆ 200 ಮಂದಿ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬಂಡುಕೋರರ ಗುಂಪೊಂದು ಮಾರಣಹೋಮ ನಡೆಸಿರುವ ಘಟನೆ ಇಥಿಯೋಪಿಯಾದಲ್ಲಿ ನಡೆದಿದೆ. ಭಾನುವಾರ ಅಮ್ಹಾರಾ ಜನಾಂಗದ 200 ಕ್ಕೂ ಹೆಚ್ಚು ಜನರನ್ನು ಹತ್ಯೆ ಮಾಡಿರುವುದಾಗಿ ಪ್ರತ್ಯಕ್ಷದರ್ಶಿಗಳು ಮತ್ತು ಅಧಿಕಾರಿಗಳು ಅಸೋಸಿಯೇಟೆಡ್ ಪ್ರೆಸ್‌ಗೆ ತಿಳಿಸಿದ್ದಾರೆ. ಒರೊಮೊ ಲಿಬರೇಶನ್ ಆರ್ಮಿ ಸದಸ್ಯರು ಇಥಿಯೋಪಿಯಾದ ಅತಿದೊಡ್ಡ ಪ್ರದೇಶ ಒರೊಮಿಯಾದ ಟೋಲೆ ಎಂಬ ಹಳ್ಳಿಯ ಮೇಲೆ ದಾಳಿ ನಡೆಸಿ 200 ಜನರನ್ನು ಹತ್ಯೆ ಮಾಡಿದ್ದಾರೆ.

ಒರೊಮೊ ಲಿಬರೇಶನ್ ಆರ್ಮಿ (OLA) ಎಂಬುದು ಅಲ್ಲಿನ ಬಂಡಾಯ ಸಂಘಟನೆಯಾಗಿದ್ದು, ಇಥಿಯೋಪಿಯಾ ಸರ್ಕಾರವು OLA ಅನ್ನು ಭಯೋತ್ಪಾದಕ ಸಂಘಟನೆ ಎಂಬ ಮುದ್ರೆ ಹಾಕಿದೆ. ಆಫ್ರಿಕಾದಲ್ಲಿ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾದ ಇಥಿಯೋಪಿಯಾದಲ್ಲಿ ನಿನ್ನೆ ನಡೆದ ಘಟನೆಯೇ ದೊಡ್ಡದು ಎಂದು ಸ್ಥಳೀಯರು ಬಣ್ಣಿಸಿದ್ದಾರೆ. ದಾಳಿಯಿಂದ ಸ್ವಲ್ಪದರಲ್ಲೇ ಪಾರಾದ ಗಿಂಬಿ ಕೌಂಟಿಯ ಅಬ್ದುಲ್ ಸೀದ್ ತಾಹಿರ್, ನಾನು 230 ದೇಹಗಳನ್ನು ಎಣಿಸಿದ್ದೇನೆ, ಇದು ನಮ್ಮ ಜೀವಿತಾವಧಿಯಲ್ಲಿ ನಾವು ನೋಡಿದ ನಾಗರಿಕರ ಮೇಲಿನ ಅತ್ಯಂತ ಭೀಕರ ದಾಳಿಯಾಗಿದೆ ಎಂದು ವ್ಯಾಖ್ಯಾನಿಸಿದ್ದಾರೆ

ಘಟನೆ ಬಳಿಕ ಆ ಪ್ರದೇಶದಿಂದ ತಮ್ಮನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರ ಮಾಡುವಂತೆ ಅಮ್ಹಾರಾ ಜನ ಬಯಸುತ್ತಿದ್ದಾರೆಂದು ಪ್ರತ್ಯಕ್ಷದರ್ಶಿ ಶಾಂಬೆಲ್ ಮನವಿ ಮಾಡಿದ್ದಾರೆ. ನವೆಂಬರ್ 2020 ರಿಂದ ದೇಶದಲ್ಲಿ ಗಲಭೆಗಳು ನಡೆಯುತ್ತಲೇ ಇವೆ. ಸರ್ಕಾರ ಮತ್ತು ಮಿತ್ರಪಕ್ಷಗಳು ಉತ್ತರದ ಟೈಗ್ರೆಯಲ್ಲಿ ದಂಗೆಯನ್ನು ಹತ್ತಿಕ್ಕಲು ಕ್ರಮ ಕೈಗೊಂಡಿದ್ದರೂ ಸಹ ಹಿಂಸಾಚಾರ ನಿಲ್ಲುತ್ತಿಲ್ಲ ಎಂದು ಅಲ್ಲಿನ ಅಧಿಕಾರಿಗಳು ಹೇಳಿದ್ದಾರೆ. ನಿನ್ನೆ ನಡೆದ ಹತ್ಯಾಕಾಂಡಕ್ಕೂ ನಮಗೂ ಸಂಬಂಧವಿಲ್ಲ ಎಂದು ಓರೆಮೊ ಲಿಬರೇಶನ್ ಆರ್ಮಿಯ ವಕ್ತಾರ ಒಡ್ಡಾ ತರ್ಬಿ ಬಲವಾಗಿ ನಿರಾಕರಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!