ಹೊಸದಿಗಂತ ವರದಿ, ಮೈಸೂರು:
ನೀವು ನನಗೆ ಕುರ್ತಾ ಹೊಲೆದು ಕೊಡ್ತೀರಾ…. ನಾನು ನಿಮ್ಮ ಮನೆಗೆ ಊಟಕ್ಕೆ ಬರಲೇ .. ಹೀಗೆಂದು ಕೇಂದ್ರ ಸರ್ಕಾರದ ವಿವಿಧ ಯೋಜನೆಯ ಫಲಾನುಭವಿಗಳನ್ನು ಆತ್ಮೀಯವಾಗಿ ಕೇಳಿದವರು ಪ್ರಧಾನಿ ನರೇಂದ್ರ ಮೋದಿ ಅವರು.
ಸೋಮವಾರ ಸಂಜೆ ಮೈಸೂರಿನ ಮಹಾರಾಜ ಕಾಲೇಜಿನ ಮೈದಾನದಲ್ಲಿ ಆಯೋಜಿಸಲಾಗಿದ್ದ ಕೇಂದ್ರ ಸರ್ಕಾರದ ಫಲಾನುಭವಿಗಳೊಂದಿಗೆ ನಡೆಸಿದ ಸಂವಾದ ಕಾರ್ಯಕ್ರಮದಲ್ಲಿ ಮಂಡ್ಯ ಜಿಲ್ಲೆ ಕಿಕ್ಕೇರಿ ಗ್ರಾಮದ ನಿವಾಸಿ ಯಶೋಧ ಸುರೇಶ್ ಎಂಬುವರು ತಮಗೆ ಹಳೇಕಾಲದ ಮನೆಯಿತ್ತು. ಅದು ತೀವ್ರವಾಗಿ ಶಿಥಲವಾಗಿ ವಾಸ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ನನಗೆ ಹೊಸ ಮನೆ ನಿರ್ಮಿಸುವುದಕ್ಕೆ ಯೋಜನೆಯ ಸೌಲಭ್ಯ ಸಿಕ್ಕಿದೆ ಎಂದು ತಿಳಿಸಿದರು.
ಮನೆಗೆ ಶೌಚಾಲಯ ನಿರ್ಮಿಸಿದ್ದೀರಾ, ಮನೆಯಲ್ಲಿ ವಾಸವಾಗಿದ್ದೀರಾ ಎಂದು ಪ್ರಶ್ನಿಸಿದ ಮೋದಿ ಅವರು ನಾನು ನಿಮಗೆ ಊಟಕ್ಕೆ ಈಗ ಬರಬಹುದೇ ಎಂದು ನಗುತ್ತಲೇ ಕೇಳಿದರು. ಆಗ ಯಶೋಧಾ ಅವರು ನಿಮ್ಮ ನಮ್ಮ ಮನೆಗೆ ಬರುವುದಾದರೆ ಅದೇ ನಮಗೆ ದೊಡ್ಡ ಪುಣ್ಯ, ಮನೆಯಲ್ಲಿ ಶೌಚಾಲಯ ನಿರ್ಮಿಸಿದ್ದೇವೆ ಎಂದು ತಿಳಿಸಿದಾಗ ಮೋದಿ ನಕ್ಕರು.
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಬಸಪ್ಪನ ಪಾಳ್ಯದ ಅಂಬಿಕಾ ಎಂಬುವರು ತಾನು 10 ಯೋಜನೆಗಳ ಫಲಾನುಭವಿಯಾಗಿದ್ದೇನೆ. ಯೋಜನೆಯಡಿ ಹೋಲಿಗೆ ಯಂತ್ರಗಳನ್ನು ತೆಗೆದುಕೊಂಡು, ಬಟ್ಟೆಗಳನ್ನು ಹೊಲೆಯುವ ಮೂಲಕ ಅದರಿಂದ ಬರುವ ಆದಾಯಗಳಿಂದ ಜೀವನವನ್ನು ಚೆನ್ನಾಗಿ ನಡೆಸುತ್ತಿದ್ದೇನೆ ಎಂದು ತಿಳಿಸಿದರು. ಆಗ ಮೋದಿ ಅವರು ನಿಮಗೆ ಬಟ್ಟೆ ಚೆನ್ನಾಗಿ ಹೊಲೆಯಲು ಬರುತ್ತಾ ಎಂದರು. ಆಕೆ ಚೆನ್ನಾಗಿ ಬರುತ್ತದೆ ಎಂದಾಗ, ಹಾಗಾದರೆ ನನಗೂ ನೀವು ಕುರ್ತಾ ಹೊಲೆದುಕೊಡುತ್ತೀರಾ ಎಂದು ಹಾಸ್ಯದಿಂದಲೇ ಕೇಳಿ ನಕ್ಕರು. ಆಗೆ ಅಂಬಿಕಾ ಕುರ್ತಾ ಹೊಲೆದುಕೊಡುತ್ತೀನಿ ಸರ್ ಎಂದು ಖುಷಿಯಿಂದಲೇ ಹೇಳಿದರು.
ಗುಂಡ್ಲುಪೇಟೆಯ ರಾಜಪ್ಪ ಎಂಬುವರು ಜಲಜೀವನ್ ಮೀಷನ್ ಯೋಜನೆಯಡಿ ಉತ್ತಮವಾಗಿ ಕೃಷಿಗೆ ನೀರು ಪಡೆಯುತ್ತಿರುವುದಾಗಿ ಹೇಳಿದರೆ, ನಿತೀಶ್ ಎಂಬಾತ ತನ್ನ ಮುಖ ಘಟನೆಯಿಂದ ವಿರೂಪಗೊಂಡಿದ್ದು, ಆಯುಷ್ಮಾನ್ ಯೋಜನೆಯಡಿ, ಅದನ್ನು ಶಸ್ತçಚಿಕಿತ್ಸೆಯ ಮೂಲಕ ಸರಿಪಡಿಸಿಕೊಂಡಿದ್ದೇನೆ. ಈಗ ಚೆನ್ನಾಗಿ ಕಾಣುತ್ತಿದ್ದೇನೆ ಎಂದಾಗ, ಮೋದಿ ಅವರು ಮತ್ತೊಮ್ಮೆ ಆತನಿಂದ ವಿವರವನ್ನು ಪಡೆದುಕೊಂಡು ಆಯುಷ್ಮಾನ್ ಭಾರತ್ ಯೋಜನೆ ಬಡವರಿಗೆ ತುಂಬಾ ಅನುಕೂಲವಾಗಿದೆ. ಇದರ ಪ್ರಯೋಜನಗಳ ಬಗ್ಗೆ ಬಡವರಿಗೆಲ್ಲಾ ತಿಳಿಸಿ, ಅವರೂ ಅನುಕೂಲ ಪಡೆದುಕೊಳ್ಳುವಂತೆ ನೋಡಿಕೊಳ್ಳಿ ಎಂದು ತಿಳಿಸಿದರು.
ಕೃತಕ ಅಲಂಕಾರಿಕ ಹೂವುಗಳ ಆಮದು ನಿಲ್ಲಿಸಿ; ಸುರೇಶ್ ಎಂಬ ಫಲಾನುಭವಿ ತಾನು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಸೌಲಭ್ಯವನ್ನು ಪಡೆದುಕೊಂಡಿದ್ದೇನೆ. ಕೃಷಿ ಹೊಂಡವನ್ನು 4.5 ಲಕ್ಷರೂ ಪಡೆದು ನಿರ್ಮಿಸಿಕೊಂಡಿದ್ದೇನೆ. 40 ರಿಂದ 50 ಜನರಿಗೆ ಉದ್ಯೋಗ ನೀಡುತ್ತಿದ್ದೇನೆ. ಹೆಚ್ಚಾಗಿ ಅಲಂಕಾರಿಕ ಹೂವುಗಳನ್ನು ಬೆಳೆಯುತ್ತಿದ್ದೇನೆ. ಆದರೆ ಇತ್ತೀಚೆಗೆ ಚೀನಾ ಹಾಗೂ ತೈವಾನ್‌ನಿಂದ ಕೃತಕವಾದ ಅಲಂಕಾರಿಕ ಹೂವುಗಳು ಬರುತ್ತಿವೆ. ಇದರಿಂದಾಗಿ ಹೂವುಗಳನ್ನು ಬೆಳೆದು ಮಾರಾಟ ಮಾಡುತ್ತಿರುವ ನಮಗೆ ಹೊಡೆತ ಬೀಳುತ್ತಿದೆ. ಹಾಗಾಗಿ ದಯವಿಟ್ಟು ಕೃತಕ ಅಲಂಕಾರ ಹೂವುಗಳು ಆಮದಾಗದಂತೆ ಕ್ರಮ ಕೈಗೊಳ್ಳಿ ಎಂದು ಮನವಿ ಮಾಡಿದರು. 20 ಮಂದಿ ಫಲಾನುಭವಿಗಳೊಂದಿಗೆ ಮೋದಿ ಸಂವಾದ ನಡೆಸಿ, ಅವರುಗಳು ಕೇಂದ್ರ ಸರ್ಕಾರದ ಯೋಜನೆಗಳಡಿ ಪಡೆದುಕೊಂಡಿರುವ ಸೌಲಭ್ಯಗಳು, ಪ್ರಯೋಜನಗಳ ಬಗ್ಗೆ ತಿಳಿದುಕೊಂಡರು.