ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿ ಸ್ಫೋಟದ ಬಗ್ಗೆ ಭಾರತದ ಪ್ರಮುಖ ತನಿಖಾ ಸಂಸ್ಥೆಗಳು ತ್ವರಿತ ಮತ್ತು ಸಮಗ್ರ ತನಿಖೆ ನಡೆಸುತ್ತಿದ್ದು, ದುರಂತಕ್ಕೆ ಕಾರಣರಾದವರನ್ನು ಸುಮ್ಮನೆ ಬಿಡಲಾಗುವುದಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಂಗಳವಾರ ಹೇಳಿದ್ದಾರೆ.
ಸೋಮವಾರ ಸಂಜೆ ಕೆಂಪು ಕೋಟೆ ಮೆಟ್ರೋ ನಿಲ್ದಾಣದ ಬಳಿಯ ಟ್ರಾಫಿಕ್ ಸಿಗ್ನಲ್‌ನಲ್ಲಿ ನಿಧಾನವಾಗಿ ಚಲಿಸುತ್ತಿದ್ದ ಕಾರಿನಲ್ಲಿ ಸಂಭವಿಸಿದ ಸ್ಫೋಟದಲ್ಲಿ ಹನ್ನೆರಡು ಜನರು ಸಾವಿಗೀಡಾಗಿದ್ದಾರೆ. ಸ್ಫೋಟಕ್ಕೆ ಕಾರಣವೇನೆಂದು ಇನ್ನೂ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.
‘ದೇಶದ ಪ್ರಮುಖ ತನಿಖಾ ಸಂಸ್ಥೆಗಳು ಘಟನೆಯ ಬಗ್ಗೆ ತ್ವರಿತ ಮತ್ತು ಸಂಪೂರ್ಣ ತನಿಖೆ ನಡೆಸುತ್ತಿವೆ ಎಂದು ನನ್ನ ಸಹ ನಾಗರಿಕರಿಗೆ ಭರವಸೆ ನೀಡಲು ನಾನು ಬಯಸುತ್ತೇನೆ’ ಎಂದು ಸಿಂಗ್ ರಕ್ಷಣಾ ಸಮಾವೇಶದಲ್ಲಿ ಹೇಳಿದರು.
‘ತನಿಖೆಯ ವಿವರಗಳನ್ನು ಶೀಘ್ರದಲ್ಲೇ ಬಹಿರಂಗಪಡಿಸಲಾಗುವುದು. ಈ ದುರಂತಕ್ಕೆ ಕಾರಣರಾದವರನ್ನು ನ್ಯಾಯದ ಕಟಕಟೆಗೆ ತಂದು ನಿಲ್ಲಿಸಲಾಗುವುದು ಮತ್ತು ಯಾವುದೇ ಸಂದರ್ಭದಲ್ಲೂ ಅವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ನಾನು ರಾಷ್ಟ್ರಕ್ಕೆ ದೃಢವಾಗಿ ಭರವಸೆ ನೀಡಲು ಬಯಸುತ್ತೇನೆ’ ಎಂದು ಅವರು ಹೇಳಿದರು.
ಮೃತರ ಕುಟುಂಬಗಳಿಗೆ ರಕ್ಷಣಾ ಸಚಿವರು ತಮ್ಮ ಸಂತಾಪ ಸೂಚಿಸಿದರು.

