ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಧಾನಿ ದೆಹಲಿಗೆ ಉಗ್ರರು ಎರಡು ಕಾರಿನಲ್ಲಿ ಬಂದಿರುವ ಸ್ಫೋಟಕ ವಿಚಾರ ಈಗ ಬೆಳಕಿಗೆ ಬಂದಿದೆ. ಐ20 ಕಾರು ಕೆಂಪುಕೋಟೆಯ ಬಳಿ ಸ್ಫೋಟಗೊಂಡರೆ ಮತ್ತೊಂದು ಕಾರು ಈಗಲೂ ನಗರದಲ್ಲಿ ಸಂಚರಿಸುತ್ತಿದೆ ಎನ್ನಲಾಗುತ್ತಿದೆ. ಈ ಕಾರಣಕ್ಕೆ ಹೈ ಅಲರ್ಟ್ ಘೋಷಣೆ ಮಾಡಿ ಪೊಲೀಸರು ಮತ್ತೊಂದು ಕಾರನ್ನು ಪತ್ತೆ ಹಚ್ಚುವ ಕೆಲಸ ಮಾಡುತ್ತಿದ್ದಾರೆ.
ಸ್ಫೋಟಗೊಂಡ ಐ20 ಕಾರು ಮತ್ತು DL-10 CK 045 ನಂಬರಿನ ಕೆಂಪು ಬಣ್ಣದ ಇಕೋಸ್ಪೋರ್ಟ್ ಕಾರು ಒಟ್ಟಿಗೆ ದೆಹಲಿಗೆ ಆಗಮಿಸಿದ್ದವು. ಎರಡೂ ಕಾರುಗಳು ಚಾಂದನಿ ಚೌಕ್ ಪಾರ್ಕಿಂಗ್ ಸ್ಥಳದಲ್ಲಿ ಒಟ್ಟಿಗೆ ಇದ್ದವು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇಕೋಸ್ಪೋರ್ಟ್ ಕಾರಿನಲ್ಲಿ ಒಬ್ಬನಿದ್ದ. ಆತ ಐ20 ಕಾರಿನಲ್ಲಿದ್ದ ಉಮರ್ ಜೊತೆ ಮಾತನಾಡುತ್ತಿದ್ದ. ಪಾರ್ಕಿಂಗ್ ಸ್ಥಳದಲ್ಲಿ ಮತ್ತು ದಾಳಿ ನಡೆದ ಸ್ಥಳದ ಬಳಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾಗಳಿಂದ ಈ ಮಾಹಿತಿಯನ್ನು ಪಡೆಯಲಾಗಿದೆ. ಈ ಎರಡೂ ಕಾರುಗಳು ಬದರ್ಪುರ್ ಗಡಿಯಿಂದ ಏಕಕಾಲದಲ್ಲಿ ದೆಹಲಿಯನ್ನು ಪ್ರವೇಶಿಸಿ ಚಾಂದನಿ ಚೌಕ್ ಮತ್ತು ಕೆಂಪು ಕೋಟೆಯ ಸುತ್ತಲೂ ಚಲಿಸುತ್ತಿದ್ದವು ಎಂದು ವಿಶೇಷ ಘಟಕದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದೆಹಲಿಯಲ್ಲಿ ಹೈ ಅಲರ್ಟ್: ಇಕೋಸ್ಪೋರ್ಟ್ ಕಾರಿಗಾಗಿ ಹುಡುಕಾಟ

