ಹೊಸದಿಗಂತ ಆನ್ ಲೈನ್ ಡೆಸ್ಕ್
ಕಳೆದ ಕೆಲವು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಗೆ ದಕ್ಷಿಣ ಕನ್ನಡದ ಮೂಡಬಿದ್ರಿ ತಾಲೂಕಿನ ಇರುವೈಲು ಗ್ರಾ.ಪಂ. ವ್ಯಾಪ್ತಿಯ ಪಂಜ ಎಂಬಲ್ಲಿ ಪ್ರಶಾಂತ್ ಮತ್ತು ರಾಜೇಶ್ ಎಂಬವರ ಆಡಿಕೆ ತೋಟ ಕುಸಿತವಾಗಿ, ತೋಟದ ಮೇಲ್ಭಾಗದಲ್ಲಿ ಇದ್ದ ಮನೆ ಅಪಾಯಕ್ಕೆ ಸಿಲುಕಿದ್ದು ಯಾವುದೇ ಕ್ಷಣದಲ್ಲಿ ಸಂಪೂರ್ಣ ಮನೆ ಧರಾಶಾಹಿಯಾಗುವ ಭೀತಿ ಎದುರಾಗಿದೆ.
ನೂರಕ್ಕೂ ಅಧಿಕ ಅಡಿಕೆ ಮರಗಳು ನಾಶವಾಗಿದ್ದು ಸುಮಾರು 25 ಲ. ರೂ. ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
ಪ್ರಶಾಂತ್ ಮತ್ತು ರಾಜೇಶ್ ಸಹೋದರರ ಮನೆಯ ಕೆಲಭಾಗದಲ್ಲಿ ಇರುವ ತೋಟದ ಮಣ್ಣು ಸಡಿಲಗೊಂಡು ಇಡೀ ತೋಟ ಕೇಳಭಾಗಕ್ಕೆ ಜಾರಿದ ಪರಿಣಾಮ ತೋಟದ ಮೇಲ್ಭಾಗದಲ್ಲಿರುವ ಮನೆ ಕೂಡಾ ಕೆಳಕ್ಕೆ ಜಾರುವ ಭೀತಿ ಎದುರಾಗಿದೆ.
ಕೆಳೆದ ಎರಡು ವರ್ಷಗಳ ಹಿಂದೆ ಗುರುಪುರದ ಮಠದ ಗುಡ್ಡೆ ಕುಸಿದ ರೀತಿಯಲ್ಲಿಯೇ ಇಲ್ಲಿ ಕೂಡಾ ಕುಸಿತವಾಗಿದ್ದು, ಮನೆಯ ಅಡಿ ಭಾಗದ ಮಣ್ಣು ನಿಧಾನಕ್ಕೆ ಕೆಳಕ್ಕೆ ಜಾರುತ್ತಿದ್ದು ಮಳೆ ಇದೇ ರೀತಿ ಮುಂದುವರಿದಲ್ಲಿ ಮಣ್ಣು ಇನ್ನಷ್ಟು ಕುಸಿದರೆ ಸಂಪೂರ್ಣ ಮನೆ ಕೆಳಕ್ಕೆ ಜಾರುವ ಸಾಧ್ಯತೆ ಇದೆ.
ಪ್ರಶಾಂತ್ ಮತ್ತು ಅವರ ಕುಟುಂಬ ಇದೇ ಮನೆಯಲ್ಲಿದ್ದು , ಮಣ್ಣು ಕುಸಿಯುವ ಬಗ್ಗೆ ಅರಿವಿಗೆ ಬರುತ್ತಿದ್ದಂತೆ ಮನೆ ಖಾಲಿ ಮಾಡಿದ್ದರಿಂದ ಯಾವುದೇ ಅನಾಹುತವಾಗಿಲ್ಲ.
ಮೂಡುಬಿದಿರೆ ತಹಸೀಲ್ದಾರ್ ಪುಟ್ಟರಾಜು, ಕಂದಾಯ ನಿರೀಕ್ಷಕ ಮಂಜುನಾಥ್ ಮತ್ತು ಗ್ರಾಮ ಲೆಕ್ಕಾಧಿಕಾರಿ ಗಾಯತ್ರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ನಷ್ಟದ ಅಂದಾಜು ನಡೆಸಿ ಪರಿಹಾರ ಒದಗಿಸುವ ಭರವಸೆ ನೀಡಿದ್ದಾರೆ ಎಂದು ಸ್ಥಳೀಯ ಪಂಚಾಯತ್ ಸದಸ್ಯ ನಾಗೇಶ್ ಅಮೀನ್ ಮಾಹಿತಿ ನೀಡಿದ್ದಾರೆ.
ಇರುವೈಲು ಗ್ರಾಮ ಪಂಚಾಯಿತಿಅಧ್ಯಕ್ಷ ವಲೇರಿಯನ್ ಕುಟಿನ್ನ, ಪಿಡಿಓ ಕಾಂತಪ್ಪ, ಮುಖಂಡ ಹರೀಶ್ ಕರ್ಕೇರ ಸೇರಿದಂತೆ ಸ್ಥಳೀಯ ಪ್ರಮುಖರು ಸ್ಥಳಕ್ಕೆ ಭೇಟಿ ನೀಡಿದ್ದರು.