ಜಪಾನ್ ಮಾಜಿ ಪ್ರಧಾನಿ ಅಬೆಯ ಜೀವಕಿತ್ತುಕೊಂಡ ಆ ಗನ್ ಯಾವುದು ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ಜಪಾನ್ ಮಾಜಿ ಪ್ರಧಾನಿ ಶಿಂಜೊ ಅಬೆ ಹತ್ಯೆಗೆ ಕೊಲೆಗಾರ ತಾನೇ ತಯಾರಿಸಿದ್ದ ಗನ್ ಬಳಕೆ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಹಾಡಹಗಲೇ ಜಪಾನ್ ಮಾಜಿ ಪ್ರಧಾನಿಯನ್ನು ನಡು ರಸ್ತೆಯಲ್ಲಿ ಭಾಷಣ ಮಾಡುತ್ತಿದ್ದ ಸಂದರ್ಭದಲ್ಲಿ ಗುಂಡಿಟ್ಟು ಕೊಲ್ಲಲಾಗಿದ್ದು, ಹಂತಕನನ್ನು 41 ವರ್ಷದ ಟೆಟ್ಸುಯಾ ಯಮಗಾಮಿ ಎಂದು ಗುರುತಿಸಲಾಗಿದೆ.
ಟೆಟ್ಸುಯಾ ಯಮಗಾಮಿ ನಿರುದ್ಯೋಗಿಯಾಗಿದ್ದು, ಈ ಹಿಂದೆ ಜಪಾನೀಸ್ ನೌಕಾಪಡೆಯಲ್ಲಿ ಸೇವೆ ಸಲ್ಲಿಸಿದ್ದ ಎನ್ನಲಾಗಿದೆ. ಈ ಜಪಾನೀಸ್ ನೌಕಾಪಡೆಯನ್ನು ಜಪಾನೀಸ್ ಮಾರಿಟೈಮ್ ಸೆಲ್ಫ್ ಡಿಫೆನ್ಸ್ ಫೋರ್ಸ್ (JMSDF) ಎಂದು ಕರೆಯಲಾಗುತ್ತದೆ. ನೌಕಾಪಡೆ ಸೇವೆ ಬಳಿಕ ಯಮಗಾಮಿ ಕೆಲಸವಿಲ್ಲದೇ ಜೀವನ ಸಾಗಿಸುತ್ತಿದ್ದ ಎಂದು ಮೂಲಗಳು ತಿಳಿಸಿವೆ.
ಅಬೆ ಹತ್ಯೆ ನಡೆದ ಸಂದರ್ಭದಲ್ಲಿ ಶೂಟರ್ ಯಮಗಾಮಿ ಕೇವಲ 10 ಅಡಿ ದೂರದಲ್ಲಿದ್ದ. ಈತ ಮೊದಲ ಗುಂಡು ಹಾರಿಸಿದಾಗ ರಕ್ಷಣಾ ಸಿಬ್ಬಂದಿ ಅಲರ್ಟ್ ಆದರೂ ಅವರು ಕ್ರಮ ಕೈಗೊಳ್ಳುವಷ್ಟರಲ್ಲಿಯೇ ಯಮಗಾಮಿ 2ನೇ ಬುಲೆಟ್ ಹಾರಿಸಿದ್ದ. ಮೊದಲ ಬುಲೆಟ್ ಅಬೆಗೆ ಹಾನಿ ಮಾಡಲಿಲ್ಲವಾದರೂ, ಹಂತಕ ಹಾರಿಸಿದ ಎರಡನೇ ಬುಲೆಟ್ ನೇರವಾಗಿ ಅವರ ಎದೆ ಸೀಳಿತ್ತು. ಹೀಗಾಗಿ ಶಿಂಜೋ ಅಬೆ ಭಾಷಣದ ಮಧ್ಯೆಯೇ ವೇದಿಕೆಯ ಮೇಲೆ ಕುಸಿದು ಬಿದ್ದರು. ಈ ವೇಳೆ ಭದ್ರತಾ ಸಿಬ್ಬಂದಿಗಳು ಯಮಗಾಮಿಯನ್ನು ನೆಲಕ್ಕೆ ಕೆಡವಿ ಅತನನ್ನು ಬಂಧಿಸಿದರು.
ತಾನೇ ಬಂದೂಕು ತಯಾರಿಸಿಕೊಂಡಿದ್ದ
ಜಪಾನ್ ನಲ್ಲಿ ಶಸ್ತ್ರಾಸ್ತ್ರ ಕಾನೂನುಗಳು ಅತ್ಯಂತ ಕಠಿಣವಾಗಿದ್ದು, ಇಲ್ಲಿ ಯಾರು ಪರವಾನಗಿ ಇಲ್ಲದೆ ಶಸ್ತ್ರಾಸ್ತ್ರ ಹೊಂದುವಂತಿಲ್ಲ. ಇದೇ ಕಾರಣಕ್ಕೆ ಹಂತಕ ತಾನೇ ಬಂದೂಕು ತಯಾರಿಸಿಕೊಂಡಿದ್ದ ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅಚ್ಚರಿ ಎಂದರೆ ಅಬೆ ಕೊಲೆಯ ಬಳಿಕ ಹಂತಕ ಯಮಗಾಮಿ ಓಡಿ ಹೋಗಲೂ ಕೂಡ ಯತ್ನಿಸಿಲ್ಲ. ಕೂಡಲೇ ಆತನನ್ನು ಭದ್ರತಾ ಅಧಿಕಾರಿಗಳು ಬಂಧಿಸಿದ್ದಾರೆ. ಪ್ರಸ್ತುತ ಆತನನ್ನು ನಾರಾದ ನಿಶಿ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!