ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಮೆದುಳು ನಿಷ್ಕ್ರಿಯವಾದ ಹಿನ್ನೆಲೆ ಬಾಲಕಿಯ ಅಂಗಾಂಗ ದಾನ ಮಾಡಲು ಪೋಷಕರು ನಿರ್ಧರಿಸಿದ್ದಾರೆ. ಹೀಗಾಗಿ ಬೆಳಗಾವಿಯ ಕೆಎಲ್ಇ ಆಸ್ಪತ್ರೆಯಲ್ಲಿ ಹೃದ್ರೋಗದಿಂದ ಬಳಲುತ್ತಿರುವ 22 ವರ್ಷದ ಯುವಕನಿಗೆ ಬಾಲಕಿಯ ಹೃದಯ ಕಸಿ ಮಾಡಲು ವೈದ್ಯರು ಸಿದ್ಧತೆ ನಡೆಸಿದ್ದಾರೆ.
ಇದಕ್ಕಾಗಿ ಝೀರೊ ಟ್ರಾಫಿಕ್ ಮೂಲಕ ಇಲ್ಲಿನ ಎಸ್‌ಡಿಎಂಯಿಂದ ಅಂಗಾಂಗಗಳನ್ನು ಸಾಗಿಸಲಾಯಿತು.
ಉತ್ತರ ಕನ್ನಡ ಜಿಲ್ಲೆಯ 15 ವರ್ಷದ ಹಿಂದೂ ಬಾಲಕಿಯನ್ನು ಧಾರವಾಡದ ಎಸ್‌ಡಿಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಾಲಕಿಯ ಮೆದುಳು ನಿಷ್ಕ್ರಿಯವಾದ ಹಿನ್ನೆಲೆಯಲ್ಲಿ ಅಂಗಾಂಗ ದಾನಕ್ಕೆ ಪೋಷಕರು ನಿರ್ಧರಿಸಿದ್ದರು. ಈ ಕಾರಣ ಬೆಳಗಾವಿಯ ಕೆಎಲ್ಇ ಆಸ್ಪತ್ರೆಯಲ್ಲಿ ಮುಸ್ಲಿಂ ಯುವಕನೊಬ್ಬ ಹೃದ್ರೋಗದಿಂದ ಬಳಲುತ್ತಿದ್ದು, ಆ ಯುವಕನಿಗೆ ಜೋಡಿಸಲು ಬಾಲಕಿಯ ಹೃದಯವನ್ನು ರವಾನಿಸಲಾಗಿದೆ.
ಜೀರೋ ಟ್ರಾಫಿಕ್‌ನಲ್ಲಿ ಎರಡು ಪೊಲೀಸ್ ಬೆಂಗಾವಲು ವಾಹನದ ಸಹಾಯದಿಂದ ಕೆಎಲ್ಇ ಆಸ್ಪತ್ರೆಗೆ ಬಾಲಕಿಯ ಹೃದಯ ರವಾನೆ ಆಗಿದ್ದು, ಕೆಎಲ್ಇ ಆಸ್ಪತ್ರೆಯ ಹೃದಯ ಶಸ್ತ್ರಚಿಕಿತ್ಸೆ ತಜ್ಞ ಡಾ. ರಿಚರ್ಡ್ ಸಾಲ್ಡಾನಾ ನೇತೃತ್ವದಲ್ಲಿ ಹೃದಯ ಚಿಕಿತ್ಸೆ ನಡೆಯಲಿದೆ.
ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ಒಂದು ಕಿಡ್ನಿ, ಇನ್ನೊಂದು ಕಿಡ್ನಿಯನ್ನು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ರವಾನಿಸಲಾಯಿತು.