ಹೊಸದಿಗಂತ ಡಿಜಿಟಲ್ ಡೆಸ್ಕ್:
ಚೀನಾ ಮೂಲದ ಪ್ರಸಿದ್ಧ ಮೊಬೈಲ್ ಕಂಪನಿಯಾದ ʼಒಪ್ಪೋ ಕಂಪನಿʼಯು ತೆರಿಗೆ ವಂಚನೆ ಪ್ರಕರಣದಲ್ಲಿ ಸಿಕ್ಕಿಬಿದ್ದಿದೆ. ಈ ಕುರಿತು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ತನಿಖೆ ನಡೆಸಿದ್ದು ಸುಳ್ಳು ವಿವರಣೆಗಳನ್ನು ನೀಡುವ ಮೂಲಕ ಸುಮಾರು 4,389 ಕೋಟಿ ರೂಪಾಯಿ ಕಸ್ಟಮ್ಸ್ ತೆರಿಗೆ ವಂಚಿಸಿರುವುದು ಬೆಳಕಿಗೆ ಬಂದಿದೆ.
ʼಗುವಾಂಗ್‌ಡಾಂಗ್ ಒಪ್ಪೋ ಮೊಬೈಲ್ ಟೆಲಿಕಮ್ಯುನಿಕೇಶನ್ಸ್ ಕಾರ್ಪೊರೇಷನ್ ಲಿಮಿಟೆಡ್, ಚೀನಾʼದ ಅಂಗಸಂಸ್ಥೆಯಾಗಿರುವ ʼಒಪ್ಪೋ ಮೊಬೈಲ್ ಇಂಡಿಯಾʼವು ಭಾರತದಾದ್ಯಂತ ಮೊಬೈಲ್ ಉತ್ಪಾದನೆ, ಬಿಡಿಭಾಗಗಳ ಜೋಡಣೆ, ಸಗಟು ವ್ಯಾಪಾರ ಹಾಗೂ ವಿತರಣೆಯಲ್ಲಿ ತೊಡಗಿಸಿಕೊಂಡಿದೆ. ಒಪ್ಪೋ, ಒನ್‌ಪ್ಲಸ್, ರಿಯಲ್‌ಮಿ ಸೇರಿದಂತೆ ವಿವಿಧ ಬ್ರ್ಯಾಂಡ್‌ಗಳ ಮೊಬೈಲ್ ಪೋನ್‌ಗಳ ಮಾರಾಟದಲ್ಲಿ ಒಪ್ಪೋಇಂಡಿಯಾ ವ್ಯವಹರಿಸುತ್ತದೆ.
ಒಪ್ಪೋದ ತೆರಿಗೆ ವಂಚನೆಯ ಕುರಿತು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ತನಿಖೆ ನಡೆಸಿದ್ದು, ಒಪ್ಪೊ ಇಂಡಿಯಾದ ಕಛೇರಿ ಹಾಗೂ ಅದರ ಪ್ರಮುಖ ಉದ್ಯೋಗಿಗಳ ನಿವಾಸಗಳಲ್ಲಿ ತಪಾಸಣೆ ನಡೆಸಲಾಗಿದೆ. ಈ ವೇಳೆ ಮೊಬೈಲ್ ತಯಾರಿಕೆಯಲ್ಲಿ ಆಮದು ಮಾಡಿಕೊಳ್ಳುವ ಕೆಲವು ವಸ್ತುಗಳ ವಿವರಣೆಯನ್ನು ಉದ್ದೇಶಪೂರ್ವಕವಾಗಿ ತಪ್ಪು ನಮೂದಿಸಲಾಗಿದೆ ಎಂದು ಪತ್ತೆಯಾಗಿದೆ. ಮತ್ತು ಈ ಕುರಿತು ಸಾಕ್ಷ್ಯಾಧಾರಗಳೂ ಪತ್ತೆಯಾಗಿವೆ.
ಹೀಗೆ ತಪ್ಪು ವಿವರಣೆ ನೀಡುವ ಮೂಲಕ ಸುಂಕ ವಿನಾಯಿತಿ ಪಡೆಯಲಾಗಿದ್ದು ಸುಮಾರು 2,981 ಕೋಟಿ ರೂಪಾಯಿಗಳ ಅನರ್ಹ ಸುಂಕ ವಿನಾಯಿತಿ ಪ್ರಯೋಜನಗಳನ್ನು ಕಂಪನಿಯು ಪಡೆದಿದೆ. ಈ ಕುರಿತು ಕಂಪನಿಯ ಕೆಲ ಹಿರಿಯ ಅಧಿಕಾರಿಗಳು ಹಾಗೂ ದೇಶೀಯ ಪೂರೈಕೆದಾರರನ್ನು ಪ್ರಶ್ನಿಸಲಾಗಿದ್ದು, ಆಮದು ಮಾಡಿಕೊಳ್ಳುವ ಸಂದರ್ಭದಲ್ಲಿ ತಪ್ಪು ಮಾಹಿತಿ ನೀಡಲಾಗಿದೆ ಎಂದು ಅವರು ಒಪ್ಪಿಕೊಂಡಿದ್ದಾರೆ.
ಅಲ್ಲದೇ ತಂತ್ರಜ್ಞಾನ, ಬ್ರಾಂಡ್, ಐಪಿಆರ್ ಪರವಾನಗಿಗಳ ಬದಲಾಗಿ ಒಪ್ಪೋ ಇಂಡಿಯಾವು ಚೀನಾಮೂಲದ ಕಂಪನಿಗಳೂ ಸೇರಿದಂತೆ ಹಲವು ಬಹುರಾಷ್ಟ್ರೀಯ ಕಂಪನಿಗಳಿಗೆ ʼರಾಯಲ್ಟಿʼ( ರಾಯಧನ) ಅಥವಾ ʼಪರವಾನಗಿ ಶುಲ್ಕʼವನ್ನು ಪಾವತಿ ಮಾಡಿದೆ. ಮತ್ತು ಇದನ್ನು ಆಮದು ಮಾಡಿಕೊಂಡ ಸರಕುಗಳ ವಹಿವಾಟಿನಿಂದ ಹೊರಗಿಡಲಾಗಿದೆ. ಆ ಮೂಲಕ 1,408 ಕೋಟಿ ರೂ. ವಂಚಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಕಸ್ಟಮ್ಸ್ ಆಕ್ಟ್, 1962 ರ ನಿಬಂಧನೆಗಳ ಅಡಿಯಲ್ಲಿ ಕಂಪನಿಗೆ ಶೋಕಾಸ್ ನೋಟೀಸ್ ನೀಡಲಾಗಿದ್ದು 4,389 ಕೋಟಿ ರೂ. ವಂಚಿತ ತೆರಿಗೆ ಮೊತ್ತವನ್ನು ಪಾವತಿಸುವಂತೆ ಸೂಚಿಸಲಾಗಿದೆ. ಹಾಗೂ ಒಪ್ಪೋ ಇಂಡಿಯಾ ಹಾಗೂ ಅದರ ಉದ್ಯೋಗಿಗಳು ಮತ್ತು ಒಪ್ಪೋ ಚೀನಾದ ಮೇಲೂ ಸಂಬಂಧಿತ ದಂಡಗಳನ್ನು ಪ್ರಸ್ತಾಪಿಸಲಾಗಿದೆ.