ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರ ರಾಜಧಾನಿ ದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 45 ಹ್ಯಾಂಡ್ ಗನ್‌ಗಳನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಇಬ್ಬರನ್ನು ಘಟನೆಗೆ ಸಂಬಂಧಿಸಿದಂತೆ ಬಂಧಿಸಲಾಗಿದೆ.
ಬಂಧಿತರು ಗಂಡ ಹೆಂಡತಿಯಾಗಿದ್ದು, ಹರಿಯಾಣದ ಗುರ್ಗಾಂವ್ ನಿವಾಸಿಗಳಾದ ಜಗಜಿತ್ ಸಿಂಗ್ ಮತ್ತು ಜಸ್ವಿಂದರ್ ಕೌರ್ ಎಂದು ಗುರುತಿಸಲಾಗಿದೆ. ಇವರೊಂದಿಗೆ 17 ತಿಂಗಳ ಹೆಣ್ಣು ಮಗು ಇತ್ತು ಎಂದು ವಿಮಾನ ನಿಲ್ದಾಣ ಅಧಿಕಾರಿಗಳು ತಿಳಿಸಿದ್ದಾರೆ.
ದಂಪತಿಗಳು ವಿಮಾನ ಸಂಖ್ಯೆ ವಿಜೆ 895ರ ಮೂಲಕ ವಿಯೆಟ್ನಾಂನ ಹೋ ಚಿ ಮಿನ್ಹ್‌ನಿಂದ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಜುಲೈ 11 ರಂದು ಬಂದಿಳಿದಿದ್ದರು. ಅವರು ಆಗಮನ ಕೊಠಡಿಯ ಗ್ರೀನ್ ಚಾನೆಲ್ ದಾಟಿ ವಿಮಾನ ನಿಲ್ದಾಣದ ನಿರ್ಗಮನ ಗೇಟ್‌ನ ಕಡೆಗೆ ತೆರಳುತ್ತಿದ್ದಾಗ ಕಸ್ಟಮ್ಸ್ ಅಧಿಕಾರಿಗಳು ಅವರನ್ನು ತಡೆದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಗಜಿತ್ ಸಿಂಗ್ ಎರಡು ಟ್ರಾಲಿ ಬ್ಯಾಗ್‌ಗಳನ್ನು ಹೊತ್ತೊಯ್ಯುತ್ತಿದ್ದರು. ಅದನ್ನು ಅವರ ಹಿರಿಯ ಸಹೋದರ ಮಂಜಿತ್ ಸಿಂಗ್, ಜಗಜಿತ್ ಸಿಂಗ್‌ಗೆ ವಿಯೆಟ್ನಾಂನಲ್ಲಿ ನೀಡಿದ್ದರು.
ಸ್ಟಮ್ ಅಧಿಕಾರಿಗಳು ವಿಮಾನ ನಿಲ್ದಾಣದ ನಿರ್ಗಮನ ಗೇಟ್‌ನಲ್ಲಿ ಅವರನ್ನು ಹಿಡಿದ ನಂತರ ಮತ್ತು ಜಗಜಿತ್ ಸಾಗಿಸಿದ ಎರಡು ಟ್ರಾಲಿ ಬ್ಯಾಗ್‌ಗಳನ್ನು ತಪಾಸಣೆ ಮಾಡಿದ ನಂತರ ಅಧಿಕಾರಿಗಳು ಮಾರುಕಟ್ಟೆ ಮೌಲ್ಯ ಅಂದಾಜು 22,50,000 ರೂಪಾಯಿಗಳ 45 ಬಗೆಯ ಬ್ರಾಂಡ್ ಗನ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಹೆಚ್ಚಿನ ವಿಚಾರಣೆಯ ಸಮಯದಲ್ಲಿ, ಈ ಇಬ್ಬರೂ ಈ ಹಿಂದೆ ಟರ್ಕಿಯಿಂದ ಸುಮಾರು 12,50,000 ರೂ. ಮೌಲ್ಯದ 25 ಬಗೆಯ ಬಂದೂಕುಗಳ ಕಳ್ಳಸಾಗಣೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದರೊಂದಿಗೆ ಇವರು ಒಟ್ಟು 35,00,000 ರೂ.ಗಳ ಮಾಲನ್ನು ಅಕ್ರಮವಾಗಿ ಸಾಗಣೆ ಮಾಡಿದ್ದಾರೆ. ಬಂದೂಕುಗಳ ಜೊತೆಗೆ ಎರಡು ಟ್ರಾಲಿ ಬ್ಯಾಗ್‌ಗಳನ್ನು ಕಸ್ಟಮ್ಸ್ ಆಕ್ಟ್, 1962 ರ ಸೆಕ್ಷನ್ 110 ರ ಅಡಿಯಲ್ಲಿ ವಶಪಡಿಸಿಕೊಳ್ಳಲಾಗಿದೆ. ದಂಪತಿಗಳಾದ ಜಗಜಿತ್ ಸಿಂಗ್ ಮತ್ತು ಜಸ್ವಿಂದರ್ ಕೌರ್ ಅವರನ್ನು ಕಸ್ಟಮ್ಸ್ ಎಸಿಯ ಸೆಕ್ಷನ್ 104 ರ ಅಡಿಯಲ್ಲಿ ಬಂಧಿಸಲಾಗಿದ್ದು, ಮಗುವನ್ನು ಅವರ ಅಜ್ಜಿಗೆ ಹಸ್ತಾಂತರಿಸಲಾಗಿದೆ.