ಹೊಸದಿಗಂತ ವರದಿ ಕಲಬುರಗಿ:
ಜಿಲ್ಲೆಯ ಚಿತ್ತಾಪುರದಲ್ಲಿ ಆರೆಸ್ಸೆಸ್ ಪಥಸಂಚಲನಕ್ಕೆ ಅನುಮತಿ ವಿಚಾರಕ್ಕೆ ಸಂಬಂಧಿಸಿದಂತೆ ಕಲಬುರಗಿ ವಿಭಾಗೀಯ ಹೈಕೋರ್ಟ್ ಪೀಠವು ಇಂದು ಗುರುವಾರ ಮಧ್ಯಾಹ್ನ 2:30ಕ್ಕೆ ವಿಚಾರಣೆ ನಡೆಸಲಿದೆ.
ಪಥಸಂಚಲನಕ್ಕೆ ಅನುಮತಿ ಕೋರಿ ಆರೆಸ್ಸೆಸ್ ಜಿಲ್ಲಾ ಸಂಘಚಾಲಕ ಅಶೋಕ್ ಪಾಟೀಲ್ ಸೇರಿದಂತೆ ವಿವಿಧ ಸಂಘಟನೆಗಳು ಸಲ್ಲಿಸಿದ ಅರ್ಜಿಗಳ ವಿಚಾರಣೆ ನಡೆಸಿರುವ ಕಲಬುರಗಿ ಹೈಕೋರ್ಟ್ ಪೀಠ,ಆರೆಸ್ಸೆಸ್ ಸೇರಿ ವಿವಿಧ ಸಂಘಟನೆಗಳಿಗೆ ಪ್ರತ್ಯೇಕ ದಿನಾಂಕ ನಿಗದಿಪಡಿಸುವಂತೆ ಹೈಕೋರ್ಟ್ ಪೀಠ ಕಳೆದ ನ.7ರ ವಿಚಾರಣೆ ವೇಳೆ ಸೂಚನೆ ನೀಡಿದ್ದು,ಒಂದು ವೇಳೆ ಪ್ರತ್ಯೇಕ ದಿನಾಂಕ ನಿಗಧಿಪಡಸಲು ವಿಫಲವಾಗಿದ್ದೆಯಾದಲ್ಲಿ ನ್ಯಾಯಾಲಯ ದಿನಾಂಕವನ್ನು ನಿಗದಿಪಡಿಸುತ್ತದೆ ಎಂದು ಹೇಳಿದೆ.
ಚಿತ್ತಾಪುರದಲ್ಲಿ ಆರೆಸ್ಸೆಸ್ ಪಥಸಂಚಲನಕ್ಕೆ ಅನುಮತಿ ಕೋರಿ ಆರೆಸ್ಸೆಸ್ ಸೇರಿ ಅರ್ಜಿ ಸಲ್ಲಿಸಿದ ಎಲ್ಲಾ ಸಂಘಟನೆಗಳ ಶಾಂತಿ ಸಭೆ ನಡೆಸುವಂತೆ ಹೈಕೋರ್ಟ್ ಆದೇಶ ಮಾಡಿತ್ತು. ಹೈಕೋರ್ಟ್ ಆದೇಶದಂತೆ ಕಲಬುರಗಿಯಲ್ಲಿ ಮೊದಲ ಶಾಂತಿ ಸಭೆ ನಡೆಯಿತು.ಆದರೆ, ಯಾವುದೇ ರೀತಿಯ ಒಮ್ಮತದ ನಿರ್ಧಾರಕ್ಕೆ ಬಾರದೇ ಮೊದಲ ಶಾಂತಿ ಸಭೆ ಅಶಾಂತಿಯಲ್ಲಿ ಅಂತ್ಯವಾದ ಬಳಿಕ, ಮತ್ತೊಮ್ಮೆ ವಿಚಾರಣೆ ನಡೆಸಿದ ಹೈಕೋರ್ಟ್ ಪೀಠ,ಎಜೆ ಶಶಿ ಕಿರಣ್ ಶೆಟ್ಟಿ ಅವರ ಬೆಂಗಳೂರಿನ ಕಚೇರಿಯಲ್ಲಿ ಮತ್ತೊಂದು ಸುತ್ತಿನ ೨ನೇ ಶಾಂತಿ ಸಭೆ ನಡೆಸುವಂತೆ ಹೇಳಿದ್ದು,೨ನೇ ಶಾಂತಿ ಸಭೆ ಫಲಪ್ರದವಾಗಿದೆ ಎಂದು ಕಳೆದ ವಿಚಾರಣೆಯಲ್ಲಿ ತಿಳಿಸಿದ್ದಾರೆ.
ಬೆಂಗಳೂರಿನ ಮತ್ತೊಂದು ಸುತ್ತಿನ ಶಾಂತಿ ಸಭೆಯಲ್ಲಿ ಆರೆಸ್ಸೆಸ್ ಪ್ರಮುಖರು,ನ.13 ಅಥವಾ 16ರಂದು ಪಥಸಂಚಲನಕ್ಕೆ ಅವಕಾಶ ನೀಡುವಂತೆ ಪ್ರಸ್ತಾವನೆ ಸಲ್ಲಿಸಿದ್ದು,ಇದನ್ನು ಪೀಠದ ಮುಂದೆ ಕಳೆದ ವಿಚಾರಣೆಯಲ್ಲಿ ತಿಳಿಸಿದ ವಕೀಲರು, ಪ್ರತ್ಯೇಕ ದಿನಾಂಕವನ್ನು ನಿರ್ಧಾರ ಮಾಡಿ,ನ.13ರಂದು ಮಧ್ಯಾಹ್ನ 2:30ಕ್ಕೆ ವರದಿ ಸಲ್ಲಿಸಿ ಎಂದು ತಿಳಿಸಿದ್ದು,ಇಂದು ಕಲಬುರಗಿ ಹೈಕೋರ್ಟ್ ಪೀಠ ವಿಚಾರಣೆ ನಡೆಸಲಿದೆ.

