May 22, 2026
Friday, May 22, 2026
spot_img

ಬಿಕ್ಲು ಶಿವ ಕೊಲೆ ಕೇಸ್: ಶಾಸಕ ಬೈರತಿ ಬಸವರಾಜ್‌ಗೆ ‘ಷರತ್ತುಬದ್ಧ’ ಜಾಮೀನು ಮಂಜೂರು

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿದ್ದ ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಐದನೇ ಆರೋಪಿಯಾಗಿ ಜೈಲು ಸೇರಿದ್ದ ಕೆ.ಆರ್. ಪುರಂ ಕ್ಷೇತ್ರದ ಬಿಜೆಪಿ ಶಾಸಕ ಬೈರತಿ ಬಸವರಾಜ್ ಅವರಿಗೆ ಕೊನೆಗೂ ಜಾಮೀನು ದೊರೆತಿದೆ. ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಶಾಸಕರಿಗೆ ಕಟ್ಟುನಿಟ್ಟಿನ ಷರತ್ತುಗಳನ್ನು ವಿಧಿಸಿ ಜಾಮೀನು ಮಂಜೂರು ಮಾಡಿದೆ.

2025ರ ಜುಲೈ 15ರಂದು ಹಲಸೂರು ಕೆರೆ ಸಮೀಪ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ರೌಡಿಶೀಟರ್ ಬಿಕ್ಲು ಶಿವ ಅಲಿಯಾಸ್ ಶಿವಪ್ರಕಾಶ್ ಹತ್ಯೆಯಾಗಿತ್ತು. ಈ ಪ್ರಕರಣದಲ್ಲಿ ಬೈರತಿ ಬಸವರಾಜ್ ಕೈವಾಡವಿದೆ ಎಂದು ಮೃತನ ತಾಯಿ ದೂರು ನೀಡಿದ್ದರು. ಇದರ ಆಧಾರದ ಮೇಲೆ ಸಿಐಡಿ ತನಿಖೆ ಚುರುಕುಗೊಳಿಸಿತ್ತು.

ಬಂಧನ ಭೀತಿಯಿಂದ ತಲೆಮರೆಸಿಕೊಂಡಿದ್ದ ಶಾಸಕರು ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್‌ನಲ್ಲಿ ಜಾಮೀನಿಗಾಗಿ ನಡೆಸಿದ ಕಾನೂನು ಹೋರಾಟ ವಿಫಲವಾಗಿತ್ತು.

ಫೆಬ್ರವರಿ 13ರಂದು ಅಹಮದಾಬಾದ್‌ನಿಂದ ಬೆಂಗಳೂರಿಗೆ ವಾಪಸ್ಸಾಗುತ್ತಿದ್ದ ವೇಳೆ ವಿಮಾನ ನಿಲ್ದಾಣದಲ್ಲಿ ಸಿಐಡಿ ಅಧಿಕಾರಿಗಳು ಇವರನ್ನು ಬಂಧಿಸಿದ್ದರು. ಸುಮಾರು ಒಂದು ತಿಂಗಳ ಕಾಲ ನ್ಯಾಯಾಂಗ ಬಂಧನದಲ್ಲಿದ್ದ ಬಸವರಾಜ್‌ಗೆ ಈಗ ನ್ಯಾಯಾಲಯ ರಿಲೀಫ್ ನೀಡಿದೆ.

ನ್ಯಾಯಾಲಯವು ತನಿಖೆಗೆ ಸಹಕರಿಸುವಂತೆ ಸೂಚಿಸಿ ಈ ಕೆಳಗಿನ ಷರತ್ತುಗಳನ್ನು ವಿಧಿಸಿದೆ:

2 ಲಕ್ಷ ರೂಪಾಯಿ ಮೊತ್ತದ ಬಾಂಡ್ ಹಾಗೂ ಇಬ್ಬರು ಶ್ಯೂರಿಟಿ ಒದಗಿಸಬೇಕು.

ಯಾವುದೇ ಕಾರಣಕ್ಕೂ ಸಾಕ್ಷ್ಯಾಧಾರಗಳನ್ನು ನಾಶಪಡಿಸುವಂತಿಲ್ಲ ಅಥವಾ ಸಾಕ್ಷಿಗಳಿಗೆ ಬೆದರಿಕೆ ಹಾಕುವಂತಿಲ್ಲ.

ನ್ಯಾಯಾಲಯದ ಅನುಮತಿಯಿಲ್ಲದೆ ವ್ಯಾಪ್ತಿಯನ್ನು ಬಿಟ್ಟು ಹೊರಹೋಗುವಂತಿಲ್ಲ.

ಈ ಆದೇಶದೊಂದಿಗೆ ಬೈರತಿ ಬಸವರಾಜ್ ಬೆಂಬಲಿಗರಲ್ಲಿ ಹರ್ಷ ವ್ಯಕ್ತವಾಗಿದ್ದು, ಶಾಸಕರು ಶೀಘ್ರದಲ್ಲೇ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !