ಜು.18ರಿಂದ ಕೇಂದ್ರದಲ್ಲಿ ಮುಂಗಾರು ಅಧಿವೇಶನ: ಸರ್ಕಾರದ ಪಟ್ಟಿಯಲ್ಲಿವೆ 24 ಮಸೂದೆಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ನಾಳೆಯಿಂದ (ಜು.18) ಕೇಂದ್ರದ ಮುಂಗಾರು ಅದಿವೇಶನ ಪ್ರಾರಂಭವಾಗಲಿದ್ದು 24 ಹೊಸ ಮಸೂದೆಗಳನ್ನು ಸಂಸತ್ತಿನಲ್ಲಿಡಲು ಸರ್ಕಾರ ಸಜ್ಜಾಗಿದೆ. ಆಗಸ್ಟ್‌ 12ರಂದು ಅಧಿವೇಶನ ಮುಕ್ತಾಯಗೊಳ್ಳಲಿದ್ದು ಪ್ರತಿಪಕ್ಷಗಳು ವಿವಿಧ ವಿಷಯಗಳನ್ನಿಟ್ಟುಕೊಂಡು ಕೇಂದ್ರವನ್ನು ಹಣಿಯಲು ಸಿದ್ಧತೆ ನಡೆಸಿವೆ.

ಅಧಿವೇಶನದಲ್ಲಿ, ಕಂಟೋನ್ಮೆಂಟ್ ಮಸೂದೆ ಮತ್ತು ಬಹು-ರಾಜ್ಯ ಸಹಕಾರಿ ಸಂಘಗಳ ಮಸೂದೆ ಸೇರಿದಂತೆ 24 ಮಸೂದೆಗಳನ್ನು ಘೋಷಿಸಲು ಕೇಂದ್ರ ಸಿದ್ಧವಾಗಿದೆ. ಉಳಿದಂತೆ ಪಟ್ಟಿಯಲ್ಲಿ ಕಾಫಿ (ಪ್ರಚಾರ ಮತ್ತು ಅಭಿವೃದ್ಧಿ) ಬಿಲ್, ಉದ್ಯಮಗಳು ಮತ್ತು ಸೇವೆಗಳ ಕೇಂದ್ರಗಳ ಅಭಿವೃದ್ಧಿ ಮಸೂದೆ(ಇದು ವಿಶೇಷ ಆರ್ಥಿಕ ವಲಯಗಳ ಕಾಯಿದೆ, 2005 ಮತ್ತು ಚೌಕಟ್ಟಿನ ನಿಯಮಗಳನ್ನು ಪರಿಷ್ಕರಿಸಲು ಪ್ರಸ್ತಾಪಿಸುತ್ತದೆ), ಸರಕುಗಳ ಭೌಗೋಳಿಕ ಸೂಚನೆಗಳು (ನೋಂದಣಿ ಮತ್ತು ರಕ್ಷಣೆ) (ತಿದ್ದುಪಡಿ) ಮಸೂದೆ, ಉಗ್ರಾಣ (ಅಭಿವೃದ್ಧಿ ಮತ್ತು ನಿಯಂತ್ರಣ) (ತಿದ್ದುಪಡಿ) ಮಸೂದೆ ಮತ್ತು ಸ್ಪರ್ಧೆ (ತಿದ್ದುಪಡಿ) ಮಸೂದೆಗಳೂ ಸೇರಿವೆ.

24 ಮಸೂದೆಗಳ ಜೊತೆಗೆ ಇನ್ನೂ ಎಂಟು ಮಸೂದೆಗಳು ಈಗಾಗಲೇ ಉಭಯ ಸದನಗಳ ಮುಂದೆ ಬಾಕಿ ಉಳಿದಿವೆ. ಇದಲ್ಲದೆ, ಮಾನ್ಸೂನ್ ಅಧಿವೇಶನದಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಯೂ ನಡೆಯಲಿದೆ. ಅಧಿವೇಶನದ ಮೊದಲ ದಿನ ಸಂಸತ್ತಿನ ಮತಗಟ್ಟೆಗಳಲ್ಲಿ ರಾಷ್ಟ್ರಪತಿ ಚುನಾವಣೆಗೆ ಸಂಸದರು ಮತ ಚಲಾಯಿಸಲಿದ್ದಾರೆ ನಂತರ ಜುಲೈ 21 ರಂದು ಮತ ಎಣಿಕೆ ನಡೆಯಲಿದೆ.

ಮುಂಗಾರು ಅಧಿವೇಶನವನ್ನು ಸುಗಮವಾಗಿ ನಡೆಸುವಂತೆ ಕೋರಿ ಭಾರತೀಯ ಜನತಾ ಪಕ್ಷವು (ಬಿಜೆಪಿ) ಭಾನುವಾರ ಬೆಳಿಗ್ಗೆ ಸಂಸತ್ತಿನ ಅನೆಕ್ಸ್ ಕಟ್ಟಡದಲ್ಲಿ ಪಕ್ಷದ ಸಭೆಯನ್ನು ಕರೆದಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಸಭೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.

ಮುಂಬರುವ ಮುಂಗಾರು ಅಧಿವೇಶನದ ಕಾರ್ಯತಂತ್ರಗಳ ಕುರಿತು ಚರ್ಚಿಸಲು ಪ್ರತಿಪಕ್ಷಗಳು ಭಾನುವಾರ ಸಭೆ ನಡೆಸುವ ನಿರೀಕ್ಷೆಯಿದೆ. ಕೇಂದ್ರ ಸರ್ಕಾರವನ್ನು ಪ್ರಶ್ನಿಸಲು ಜಂಟಿ ಕಾರ್ಯತಂತ್ರವನ್ನು ಅವರು ಚರ್ಚಿಸಲಿದ್ದಾರೆ. ಪ್ರತಿಪಕ್ಷಗಳ ಸಭೆಯ ಆಹ್ವಾನವನ್ನು ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಗೂ ನೀಡಲಾಗಿದೆ.

ಏತನ್ಮಧ್ಯೆ, ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು ಅಧಿವೇಶನವನ್ನು ಉತ್ಪಾದಕವಾಗುವಂತೆ ಮಾಡಲು ನಾಯಕರಲ್ಲಿ ಮನವಿ ಮಾಡಿದ್ದಾರೆ.

ಪ್ರತಿಪಕ್ಷಗಳ ಕಾರ್ಯತಂತ್ರವೇನು?
ಪ್ರಮುಖವಾಗಿ ಮೂರು ವಿಷಯಗಳ ಕುರಿತು ಚರ್ಚಿಸಲು ಪ್ರತಿಪಕ್ಷಗಳು ಚಿಂತಿಸಿದ್ದು ಹೆಚ್ಚುತ್ತಿರುವ ಹಣದುಬ್ಬರ, ಏರುತ್ತಿರುವ ಇಂಧನ ಬೆಲೆಗಳು, ಅಗ್ನಿಪಥ್ ಯೋಜನೆ, ನಿರುದ್ಯೋಗ ಮತ್ತು ಡಾಲರ್ ಎದುರು ರೂಪಾಯಿಯ ಕುಸಿತ ಸೇರಿದಂತೆ ಹಲವು ವಿಷಯಗಳು ಸೇರಿಕೊಂಡಿವೆ.

ಎಲ್‌ಪಿಜಿ ಸಿಲಿಂಡರ್ ದರ, ಬೆಲೆ ಏರಿಕೆ, ನಿರುದ್ಯೋಗ ಮತ್ತು ರೂಪಾಯಿ ಕುಸಿತದ ಬಗ್ಗೆ ಮೊದಲ ವಿಷಯವಾಗಿದ್ದು ಎರಡನೆಯದು ಅಗ್ನಿಪಥ್ ಯೋಜನೆ ಕುರಿತಾಗಿದ್ದು, ಸೇನಾ ಸಾಮರ್ಥ್ಯವನ್ನು ದುರ್ಬಲಗೊಳಿಸುತ್ತಿರುವ ಕುರಿತು ಮತ್ತು ಪೂರ್ವ ಲಡಾಖ್‌ನಲ್ಲಿ ಚೀನಾದೊಂದಿಗೆ ಮುಂದುವರಿದ ಉದ್ವಿಗ್ನತೆ ಕುರಿತು ಪ್ರತಿಪಕ್ಷವು ಪ್ರಶ್ನೆ ಇಡಲಿದೆ. ಮೂರನೇ ವಿಷಯವಾಗಿ ಸರ್ಕಾರಿ ಏಜೆನ್ಸಿಗಳು/ಸಂಸ್ಥೆಗಳ ನಿರಂತರ ದುರ್ಬಳಕೆ ಮತ್ತು ಪ್ರಜಾಪ್ರಭುತ್ವದ ಮೇಲಿನ ದಾಳಿಯ ಕುರಿತಾಗಿ ಪ್ರತಿಪಕ್ಷವು ಪ್ರಶ್ನೆಗಳನ್ನು ಕೇಳಲಿದೆ ಎಂದು ಮೂಲಗಳು ವರದಿ ಮಾಡಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!