ಮೋದಿಯವರು ಆರೋಪ ಎದುರಿಸಿದ್ದನ್ನು ನೋಡಿ ಕಾಂಗ್ರೆಸ್‌ ಕಲಿಯಬೇಕಿದೆ: ಸಿ.ಟಿ.ರವಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಕಾಂಗ್ರೆಸ್‌ ಪಕ್ಷಕ್ಕೆ ಸಂವಿಧಾನ ಬದ್ಧ ಸಂಸ್ಥೆಗಳ ಬಗ್ಗೆ ಗೌರವ ಇಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದ್ದಾರೆ.

ಕಾಂಗ್ರೆಸ್‌ ಮುಖಂಡೆ ಸೋನಿಯಾಗಾಂಧಿಯವರಿಗೆ ಇಡಿ ನೋಟೀಸ್‌ ವಿರೋಧಿಸಿ ಕಾಂಗ್ರೆಸ್‌ ದೇಶವ್ಯಾಪಿ ಹೋರಾಟ ಹಮ್ಮಿಕೊಂಡಿರುವುದರ ಕುರಿತು ಮಾಧ್ಯಮದವರರೊಂದಿಗೆ ಮಾತನಾಡಿದ ಅವರು “ನ್ಯಾಷನಲ್ ಹೆರಾಲ್ಡ್ ಸಂಸ್ಥೆಗೆ ಸಂಬಂಧಿಸಿ ಆಗಿರುವ ಅವ್ಯವಹಾರಕ್ಕೆ ಸಂಬಂಧಿಸಿ ಇ.ಡಿ. ನೋಟಿಸ್ ಕೊಡಲಾಗಿದೆ. ಅವರು ಪ್ರಾಮಾಣಿಕರಿದ್ದರೆ ಇ.ಡಿ.ಗೆ ಯಾಕೆ ಹೆದರಬೇಕು? ಭ್ರಷ್ಟಾಚಾರ ಮಾಡಿದ್ದರೆ ಅವರನ್ನು ಹಾಗೇ ಬಿಡಬೇಕೆಂದು ಕಾಂಗ್ರೆಸ್‍ನವರು ಬಯಸುತ್ತಾರೆಯೇ?” ಎಂದು ಪ್ರಶ್ನಿಸಿದರು.

“ಸಂವಿಧಾನ ರಚನೆ ಸಂದರ್ಭದಲ್ಲಿ ಅವತ್ತು ಕಾಂಗ್ರೆಸ್ಸಿಗರಿಗೆ ಪ್ರಭಾವ ಇತ್ತು. ಆಗ ಕಾಂಗ್ರೆಸ್‍ನವರು ಭ್ರಷ್ಟಾಚಾರ ಮಾಡಿದರೆ ಪ್ರಶ್ನಿಸುವಂತಿಲ್ಲ ಎಂಬ ವಿಧಿಯನ್ನು ಸಂವಿಧಾನದಲ್ಲಿ ಸೇರಿಸಬಹುದಿತ್ತು. ಇಷ್ಟಾಗಿಯೂ ತನಿಖೆ ನಡೆಸಿದ್ದರೆ ಅದು ಸಂವಿಧಾನವಿರೋಧಿ ಆಗುತ್ತಿತ್ತು. ಈಗ ತನಿಖೆ ನಡೆಸುವುದು ಸಂವಿಧಾನಬದ್ಧವಾಗಿಯೇ ಇದೆ” ಎಂದ ಅವರು “ಅಂದು ಪ್ರಧಾನಿ ಮೋದಿ ಹೇಗೆ ಆರೋಪವನ್ನು ಎದುರಿಸಿದರು, ಅವರು ಹೇಗೆ ನಡೆದುಕೊಂಡಡರು ಎಂಬುದನ್ನು ನೋಡಿ ಕಾಂಗ್ರೆಸ್‌ ನವರು ಕಲಿಯಬೇಕಿದೆ. ಅವರು ಸತತ 7 ತಿಂಗಳ ಕಾಲ ಎಸ್‍ಐಟಿ ತನಿಖೆಗೆ ಹಾಜರಾದರು. ಅವರೆಂದೂ ನಾಟಕ ಮಾಡುತ್ತಾ ಗುಂಪುಸೇರಿಸಿಕೊಂಡು ಪ್ರತಿಭಟನೆ ಮಾಡಲಿಲ್ಲ” ಎಂದರು.

“ನ್ಯಾಷನಲ್ ಹೆರಾಲ್ಡ್ ಕೇಸಿನಲ್ಲಿನ ದೌರ್ಬಲ್ಯವನ್ನು ಜನರನ್ನು ಸೇರಿಸಿ ಮುಚ್ಚಿಹಾಕಲು ಕಾಂಗ್ರೆಸ್ ಪ್ರಯತ್ನ ಮಾಡುತ್ತಿದೆ. ಈ ವಿಚಾರದಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅಮಾಯಕರಲ್ಲ. ಅಮಾಯಕರಾಗಿದ್ದರೆ ಅವರು ತಲಾ 38 ಶೇಕಡಾ ಷೇರನ್ನು ತಮ್ಮ ಹೆಸರಿಗೆ ವರ್ಗಾಯಿಸುತ್ತಿರಲಿಲ್ಲ. ನ್ಯಾಷನಲ್ ಹೆರಾಲ್ಡ್ ಎಂಬುದು ಸ್ವಾತಂತ್ರ್ಯ ಹೋರಾಟಗಾರರು ಹುಟ್ಟುಹಾಕಿದ ಸಂಸ್ಥೆ. ಒಂದು ಸಾರ್ವಜನಿಕ ಆಸ್ತಿಯನ್ನು ಖಾಸಗಿ ಆಸ್ತಿಯಾಗಿ ಪರಿವರ್ತನೆ ಮಾಡಿಕೊಳ್ಳುವುದು ಅಪರಾಧವಲ್ಲವೇ? ಜನರನ್ನು ಸೇರಿಸಿ ರೋಡ್‌ ಷೋ ಮಾಡಿದರೆ ಭ್ರಷ್ಟಾಚಾರ ಮುಚ್ಚಿಹಾಕಬಹುದು ಎಂಬ ತಪ್ಪು ಕಲ್ಪನೆ- ತಪ್ಪು ಸಂದೇಶವನ್ನು ಕೊಡಲು ಕಾಂಗ್ರೆಸ್ ಹೊರಟಿದೆ. ಈ ಮೂಲಕ ಭ್ರಷ್ಟಾಚಾರ ಮಾಡಿದವರು ಮೆರೆಯಬಹುದೆಂಬ ಸಂದೇಶ ದೇಶದ ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ. ಇದು ಸರಿಯಾದ ಕ್ರಮವಲ್ಲ. ಇದು ಖಂಡನೀಯ ಎಂದರು.

ಇನ್ನು ನೆರೆ ಪರಿಹಾರದ ಕುರಿತಾಗಿ ಅವರು ಹೀಗೆ ಹೇಳಿದ್ದಾರೆ “ಎನ್‍ಡಿಆರ್‍ಎಫ್ ಮಾರ್ಗದರ್ಶಿ ಸೂತ್ರಗಳ ಪ್ರಕಾರ ಹಾಳಾದ ಒಂದು ಮನೆಗೆ 95 ಸಾವಿರ ಪರಿಹಾರ ಕೊಡಬೇಕಿದ್ದು, ಬದಲಾಗಿ 5 ಲಕ್ಷವನ್ನು ಸರಕಾರ ನೀಡುತ್ತಿದೆ. ಇದೇ ನಿಯಮಾವಳಿ ಪ್ರಕಾರ ಕೃಷಿ ಭೂಮಿಯಲ್ಲಿ ಬೆಳೆ ನಷ್ಟವಾದರೆ ಒಂದು ಹೆಕ್ಟೇರ್‍ಗೆ 6,500 ರೂಪಾಯಿ ಬದಲಾಗಿ ನಾವು 13 ಸಾವಿರ ಕೊಡುತ್ತಿದ್ದೇವೆ. ತೋಟಗಾರಿಕೆ ಬೆಳೆಗಳಿಗೆ 28 ಸಾವಿರ ಕೊಡಲಾಗುತ್ತಿದೆ. ಎಲ್ಲ ವಿಷಯದಲ್ಲೂ ಪರಿಹಾರದ ಮೊತ್ತ ಜಾಸ್ತಿ ಮಾಡಿ ನೆರವು ನೀಡಲಾಗುತ್ತಿದೆ. ಬಹುತೇಕ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಾಸಕರು ನೆರೆ ಪರಿಹಾರ ಕಾಮಗಾರಿಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಮುಖ್ಯಮಂತ್ರಿಯವರು ಜಿಲ್ಲಾಧಿಕಾರಿಗಳ ಸಭೆ ನಡೆಸಿದ್ದಲ್ಲದೆ, ಸ್ವತಃ ಅತಿವೃಷ್ಟಿ ಇರುವ ಜಿಲ್ಲೆಗಳಿಗೆ ಭೇಟಿ ಕೊಟ್ಟಿದ್ದಾರೆ. ನೆರೆ ಪರಿಹಾರ ಕಾಮಗಾರಿಯನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ”

ರಾಷ್ಟ್ರಪತಿ ಚುನಾವಣೆಯ ಬಗ್ಗೆ ಮಾತನಾಡಿದ ಅವರು “ರಾಷ್ಟ್ರಪತಿ ಆಯ್ಕೆಗೆ ನಾಳೆ ಚುನಾವಣೆ ನಡೆಯಲಿದೆ. ವಿಧಾನಸಭೆ, ಲೋಕಸಭೆ ಮತ್ತು ರಾಜ್ಯಸಭಾ ಸದಸ್ಯರು ಮತದಾನ ಮಾಡಲಿದ್ದಾರೆ. ಕಳೆದಬಾರಿ 17 ಚುನಾಯಿತ ಪ್ರತಿನಿಧಿಗಳ ಮತವೇ ಅಸಿಂಧುವಾಗಿತ್ತು. ಇದನ್ನು ತಡೆಯಲು ಬಿಜೆಪಿ ಇಡೀ ದೇಶದಲ್ಲಿ ಅಣಕು ಮತದಾನವನ್ನು ಏರ್ಪಡಿಸಿ ತರಬೇತಿ ಕೊಡುತ್ತಿದೆ. ಅಸಿಂಧು ಮತಗಳ ಸಂಖ್ಯೆ ಶೂನ್ಯವಾದರೆ ಭಾರತದ ಪ್ರಜಾಪ್ರಭುತ್ವ ಮತ್ತು ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಸಂವಿಧಾನಕ್ಕೆ ಗೌರವ ತಂದು ಕೊಡಲಿದೆ ಎಂದು ಅಭಿಪ್ರಾಯಪಟ್ಟರು.

ರಾಷ್ಟ್ರಪತಿ ಹಾಗೂ ಉಪರಾಷ್ಟ್ರಪತಿ ಅಭ್ಯರ್ಥಿಗಳ ಆಯ್ಕೆ ಕುರಿತು ಉಲ್ಲೇಖಿಸಿದ ಅವರು “ಎನ್‌ಡಿಎಯು ಒಬ್ಬ ಆದಿವಾಸಿ ಸುಶಿಕ್ಷಿತ ಅನುಭವಿ ಮಹಿಳೆಯನ್ನುರಾಷ್ಟ್ರಪತಿ ಅಭ್ಯರ್ಥಿಯಾಗಿಸಿ ಅತ್ಯಂತ ಗೌರವ ತರುವ ಕೆಲಸವನ್ನು ಮಾಡಿತ್ತು. ಈಗ ಉಪ ರಾಷ್ಟ್ರಪತಿ ಸ್ಥಾನಕ್ಕೆ ಕೃಷಿ ಕುಟುಂಬದಿಂದ ಬಂದ ಜಾಟ್ ಸಮುದಾಯದ ಜಗದೀಪ್ ಧನಕರ್ ಅವರನ್ನು ಆಯ್ಕೆ ಮಾಡಿ ಇಡೀ ದೇಶದ ಕೃಷಿಕರಿಗೆ ಗೌರವ ನೀಡುವ ಕೆಲಸವಾಗಿದೆ. ಆದಿವಾಸಿ ಸಮುದಾಯದ ಮಹಿಳೆಯ ಆಯ್ಕೆ ಮೂಲಕ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯಲಾಗಿತ್ತು. ಸ್ವಾತಂತ್ರ್ಯದ ಬಳಿಕ ಮೊದಲ ಬಾರಿಗೆ ಆದಿವಾಸಿ ಮಹಿಳೆಗೆ ಪ್ರಾತಿನಿಧ್ಯ ಕೊಟ್ಟಿದ್ದು, ಇನ್ನೊಂದೆಡೆ ಜಾಟ್ ಸಮಾಜದ ಜಗದೀಪ್ ಅವರ ಆಯ್ಕೆಯ ಮೂಲಕ ಇಡೀ ರೈತ ಸಮುದಾಯಕ್ಕೆ ಗೌರವ ಕೊಟ್ಟಿದ್ದಾರೆ”ಎಂದರು.

ರಾಷ್ಟ್ರಪತಿ ಚುನಾವಣೆಯಲ್ಲಿ ಜೆಡಿಎಸ್ ಎನ್‍ಡಿಎ ಅಭ್ಯರ್ಥಿಗೆ ಬೆಂಬಲ ನೀಡಿರುವ ಕುರಿತು ಮಾತನಾಡಿದ ಅವರು ಅಭ್ಯರ್ಥಿಯ ಆಯ್ಕೆಯನ್ನು ಎನ್‍ಡಿಎ ಮಾಡಿದ್ದರೂ ಆಯ್ಕೆಯಾದ ಬಳಿಕ ರಾಷ್ಟ್ರಪತಿ ಯಾವುದೇ ಪಕ್ಷಕ್ಕೆ ಸೇರಿದವರಾಗಿರುವುದಿಲ್ಲ. ಆಂಧ್ರದಲ್ಲಿ ಹಾವು ಮುಂಗುಸಿಯಂತಿರುವ ಟಿಡಿಪಿ ಮತ್ತು ವೈಎಸ್‍ಆರ್‍ಸಿಪಿ ಕೂಡ ಬೆಂಬಲ ಕೊಟ್ಟಿವೆ. ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ, ಏಕನಾಥ ಶಿಂಧೆ ನೇತೃತ್ವದ ಶಿವಸೇನೆಗಳು ಬೆಂಬಲ ಕೊಡುತ್ತಿವೆ. ಒಡಿಶಾದಲ್ಲಿ ಬಿಜು ಜನತಾದಳದ ಬೆಂಬಲ ಲಭಿಸಿದೆ. ಜಾರ್ಖಂಡ್‍ನಲ್ಲಿ ಕಾಂಗ್ರೆಸ್ ಜೊತೆ ಅಧಿಕಾರದಲ್ಲಿರುವ ಜಾರ್ಖಂಡ್ ಮುಕ್ತಿ ಮೋರ್ಚಾವು ಕೂಡ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸುತ್ತಿವೆ. ಇದನ್ನು ಪಕ್ಷಕ್ಕೆ ಜೋಡಿಸಿ ಸಣ್ಣ ರಾಜಕಾರಣ ಮಾಡಲು ಇಚ್ಛಿಸುವುದಿಲ್ಲ” ಎಂದರು ಹೇಳಿದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!