Friday, November 14, 2025

ಮಹಿಳೆಯ ಮೇಲೆ ಚಿರತೆ ದಾಳಿ, ಸಫಾರಿ ವೇಳೆ ಗ್ಲಾಸ್ ತೆರೆದಿದ್ದು ದುರಂತಕ್ಕೆ ಕಾರಣ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರು ಹೊರವಲಯದಲ್ಲಿರುವ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಸಫಾರಿ ವೇಳೆ ಆತಂಕಕಾರಿ ಘಟನೆಯೊಂದು ನಡೆದಿದೆ. ಚೆನ್ನೈನಿಂದ ಬಂದಿದ್ದ ಪ್ರವಾಸಿಗ ಮಹಿಳೆಯೊಬ್ಬರ ಮೇಲೆ ಚಿರತೆಯೊಂದು ದಾಳಿ ಮಾಡಿ ಗಾಯಗೊಳಿಸಿದೆ.

ಚೆನ್ನೈ ಮೂಲದ 50 ವರ್ಷದ ವಹಿತ ಬಾನು ಎಂಬುವವರು ತಮ್ಮ ಪತಿ ಮತ್ತು ಮಗನೊಂದಿಗೆ ಬನ್ನೇರುಘಟ್ಟಕ್ಕೆ ಸಫಾರಿಗೆ ಆಗಮಿಸಿದ್ದರು. ಅವರು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವಾಹನದಲ್ಲಿ ಸಫಾರಿ ವೀಕ್ಷಿಸುತ್ತಿದ್ದರು.

ದುರದೃಷ್ಟವಶಾತ್, ವಹಿತ ಬಾನು ಅವರು ಪ್ರಾಣಿಗಳನ್ನು ಹತ್ತಿರದಿಂದ ನೋಡುವ ಸಲುವಾಗಿ ವಾಹನದ ಗ್ಲಾಸ್ ತೆರೆದಿದ್ದರು ಎನ್ನಲಾಗಿದೆ. ಈ ಸಂದರ್ಭವನ್ನು ಬಳಸಿಕೊಂಡ ಚಿರತೆಯು ಏಕಾಏಕಿ ವಾಹನದ ಮೇಲೆ ನೆಗೆದು, ಗಾಜಿನಿಂದ ಹೊರಗಿದ್ದ ವಹಿತ ಬಾನು ಅವರ ಕೈಗೆ ಗಂಭೀರವಾಗಿ ಗಾಯಗೊಳಿಸಿದೆ.

ತಕ್ಷಣವೇ ಗಾಯಾಳು ಮಹಿಳೆಯನ್ನು ಜಿಗಣಿಯ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಸಫಾರಿ ಸಂದರ್ಭದಲ್ಲಿ ಪ್ರವಾಸಿಗರು ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು, ಅದರಲ್ಲೂ ಮುಖ್ಯವಾಗಿ ವಾಹನದ ಗ್ಲಾಸ್‌ಗಳನ್ನು ತೆರೆಯಬಾರದು ಎಂಬ ಎಚ್ಚರಿಕೆಯನ್ನು ಈ ಘಟನೆ ಮತ್ತೊಮ್ಮೆ ಒತ್ತಿ ಹೇಳಿದೆ.

error: Content is protected !!