ಹೊಸದಿಗಂತ ಡಿಜಿಟಲ್ ಡೆಸ್ಕ್:
ಶತೃ ಪಾಳೆಯದಿಂದ ತೂರಿಬಂದ ಬುಲೆಟ್ ಕ್ಷಣಮಾತ್ರದಲ್ಲಿ ಯೋಧನ ದೇಹಕ್ಕೆ ಅಪ್ಪಳಿಸಿದೆ. ಇನ್ನೇನು ಸಾವು ಖಚಿತ ಎಂದುಕೊಂಡ ಯೋಧ ಭಯಾತಂಕದಲ್ಲೇ ಎದೆಯನ್ನು ಒತ್ತಿಹಿಡಿಯುತ್ತಾನೆ. ಅರೆ ಅಚ್ಚರಿ, ಅಲ್ಲಿ ರಕ್ತವೂ ಇಲ್ಲ, ನೋವೂ ಇಲ್ಲ. ಯೋಧನಿಗೆ ಮತ್ತಷ್ಟು ಅಚ್ಚರಿ. ಇದು ನಿಜಕ್ಕೂ ಕನಸಾ? ನಿಜವಾ ಎಂದುಕೊಳ್ಳುತಲೇ ಗುಂಡುಬಿದ್ದ ಜಾಗವನ್ನು ತಡಕಾಡಿದರೆ ಕಿಸೆಯಲ್ಲಿರಿಸಿದ್ದ ಐಫೋನು ಸಿಗುತ್ತಿದೆ. ಹೌದು ಅಚ್ಚರಿಯಾದರೂ ಸತ್ಯ. ಯೋಧನಿಗೆ ಬೀಳಬೇಕಿದ್ದ ಗುಂಡನ್ನು ಐಫೋನ್ ತಡೆದು, ಆತನ ಪ್ರಾಣ ಉಳಿಸಿದೆ. ಈತಹದ್ದೊಂದು ಘಟನೆ ನಡೆದಿರುವುದು ಉಕ್ರೇನ್ ನಲ್ಲಿ. ಈ ಘಟನೆಯ ಹೆಚ್ಚಿನ ವಿವರಗಳು ಲಭ್ಯವಿಲ್ಲ. ಆದರೆ, ಉಕ್ರೇನಿಯನ್ ಸೈನಿಕನ್ನು ಐಫೋನ್ 11 ಪ್ರೊ ಫೋನ್ ಬುಲೆಟ್‌ನಿಂದ ರಕ್ಷಿಸಿದ ವೈರಲ್ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಭರ್ಜರಿ ಸದ್ದು ಮಾಡುತ್ತಿದೆ.
ರೆಡ್ಡಿಟ್‌ನಲ್ಲಿ ಹಂಚಿಕೊಳ್ಳಲಾದ ಈ ಕ್ಲಿಪ್ ನಲ್ಲಿ , ಉಕ್ರೇನಿಯನ್ ಸೈನಿಕನು ತನ್ನ ಕಿಸೆಯಿಂದ ಗುಂಡುಹೊಕ್ಕಿದ್ದ ಐಫೋನ್ ಅನ್ನು ಹೊರತೆಗೆಯುವುದನ್ನು ತೋರಿಸುತ್ತದೆ. ಈ ವಿಡಿಯೋ ಗೆ ಸಾವಿರಾರು ಕಾಮೆಂಟ್‌ಗಳು ಹರಿದುಬಂದಿವೆ. ಒಬ್ಬ ಬಳಕೆದಾರನು ತಮಾಷೆಯಾಗಿ “ಆಪಲ್ ಕಡೆಗೂ ಒಂದು ಉತ್ತಮ ಕೆಲಸ ಮಾಡಿದೆ!” ಎಂದು ಬರೆದಿದ್ದಾರೆ. ಮತ್ತೆ ಕೆಲವರು ʼಸ್ಮಾರ್ಟ್‌ಫೋನ್‌ನಲ್ಲಿ ಬಳಸಿದ ವಸ್ತುಗಳನ್ನು ಬಳಸಿಕೊಂಡು ಬುಲೆಟ್ ಪ್ರೂಫ್ ಗಳನ್ನು ಏಕೆ ರಚಿಸಬಾರದು? ಇದು ಇನ್ನೂ ಹೆಚ್ಚು ಹಗುರವಾಗಿರುತ್ತದೆʼ ಎಂದು ಸಲಹೆ ನೀಡಿದ್ದಾರೆ.