ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಹಮ್ಮದ್ ಯೂನಸ್ ನೇತೃತ್ವದ ಬಾಂಗ್ಲಾದೇಶ ಪಾಕಿಸ್ತಾನ ಶೈಲಿಯ ಮಿಲಿಟರಿ ಆಡಳಿತದ ಕಡೆಗೆ ದೂಡುತ್ತಿದೆ. ಇದನ್ನು ತಡೆಯುವುದು ಭಾರತದಿಂದ ಮಾತ್ರ ಸಾಧ್ಯ ಎಂದು ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಹೇಳಿದ್ದಾರೆ.
ಮಾಧ್ಯಮವೊಂದರ ಜೊತೆ ಮಾತನಾಡಿರುವ ಅವರು, ಭಾರತ ಬಾಂಗ್ಲಾದೇಶದ ಸ್ಥಿರ ಸ್ನೇಹಿತ ರಾಷ್ಟ್ರ. ಇಲ್ಲಿ ಪ್ರಜಾಪ್ರಭುತ್ವವನ್ನು ಉಳಿಸುವಲ್ಲಿ ಭಾರತ ಪ್ರಮುಖ ಪಾತ್ರವಹಿಸಬೇಕಿದೆ ಎಂದು ಅವರು ಹೇಳಿದ್ದಾರೆ.
ಬಾಂಗ್ಲಾದೇಶದಲ್ಲಿ ಪಾಕಿಸ್ತಾನ ಶೈಲಿಯ ಆಡಳಿತ ಜಾರಿಯಾಗದಂತೆ ತಡೆಯಲು ಭಾರತದ ಪಾತ್ರ ನಿರ್ಣಾಯಕವಾಗಿದೆ ಎಂದು ಅವರು ಹೇಳಿದ್ದಾರೆ.
ಬಾಂಗ್ಲಾದೇಶದ ಆಡಳಿತದ ಬಗ್ಗೆ ಕಳವಳವನ್ನು ವ್ಯಕ್ತಪಡಿಸುತ್ತಲೇ ಇರುವ ಅವರು, ಬಾಂಗ್ಲಾದೇಶದಲ್ಲಿ ಈಗ ಭೌಗೋಳಿಕ ರಾಜಕೀಯ ಪರಿಸ್ಥಿತಿಗಳು ಬದಲಾಗುತ್ತಿವೆ. ಹಿಂದಿನಿಂದಲೂ ಭಾರತವು ಬಾಂಗ್ಲಾದೇಶದ ಅತ್ಯುತ್ತಮ ಮಿತ್ರ ರಾಷ್ಟ್ರವಾಗಿದೆ. ಇದರಿಂದಾಗಿಯೇ ಬಾಂಗ್ಲಾದೇಶದಲ್ಲಿ ಸ್ಥಿರ, ಪ್ರಜಾಪ್ರಭುತ್ವ ಆಡಳಿತ ಇಂದಿಗೂ ಉಳಿದಿದೆ ಎಂದು ಅವರು ಹೇಳಿದ್ದಾರೆ.
ಅಪಾಯದ ಕ್ಷಣದಲ್ಲಿ ಭಾರತ ನನ್ನನ್ನು ಸ್ವಾಗತಿಸಿದೆ. ಇದಕ್ಕಾಗಿ ನಾನು ಭಾರತೀಯರಿಗೆ ಕೃತಜ್ಞಳಾಗಿದ್ದೇನೆ ಎಂದಿರುವ ಅವರು, ಭಾರತದೊಂದಿಗೆ ಸಂಬಂಧ ಸ್ಥಾಪನೆಯಲ್ಲಿ ಯೂನಸ್ ಅವರು ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಇದಕ್ಕೆ ಅವರ ಸ್ವಂತ ನೀತಿಗಳು ಕಾರಣ. ಅವರ ಉಗ್ರಗಾಮಿ ಯೋಜನೆಗಳು, ಧಾರ್ಮಿಕ ಅಲ್ಪಸಂಖ್ಯಾತರನ್ನು ರಕ್ಷಿಸುವಲ್ಲಿ ಅವರ ವೈಫಲ್ಯ, ಭಾರತ ವಿರೋಧಿ ಹೇಳಿಕೆಗಳು ಇದಕ್ಕೆ ಕಾರಣ ಎಂದು ಅವರು ತಿಳಿಸಿದ್ದಾರೆ.
ಬಾಂಗ್ಲಾದೇಶದಲ್ಲಿ ಪ್ರಜಾಪ್ರಭುತ್ವ ಮಾದರಿಯ ಆಡಳಿತವನ್ನು ಮರು ಸ್ಥಾಪನೆ ಮಾಡದೇ ಇದ್ದಾರೆ ಬಾಂಗ್ಲಾದೇಶವು ಉಗ್ರಗಾಮಿ ಪ್ರಭಾವಕ್ಕೆ ಒಳಗಾಗುತ್ತದೆ. ಇದರಿಂದ ಭಾರಿ ಅಪಾಯವಿದೆ ಎಂದ ಅವರು, ಯೂನಸ್ ವಾಸ್ತವವಾಗಿ ಹಿಜ್ಬ್-ಉತ್ ತಹ್ರೀರ್ ಉಗ್ರಗಾಮಿಗಳು ನಡೆಸುವ ಆಡಳಿತದ ನಾಯಕನಾಗಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.
ಭಾರತ ಸೇರಿದಂತೆ ಇತರ ಪ್ರಜಾಪ್ರಭುತ್ವ ರಾಷ್ಟ್ರಗಳು ಬಾಂಗ್ಲಾದಲ್ಲಿ ಮುಕ್ತ ಮತ್ತು ನ್ಯಾಯಯುತ ಚುನಾವಣೆ ನಡೆಸಲು ಒತ್ತಡ ಹೇರವುದನ್ನು ಮುಂದುವರಿಸಬೇಕು ಎಂದು ಮನವಿ ಮಾಡಿದ ಅವರು, ಬಾಂಗ್ಲಾದೇಶದ ರಾಜಕೀಯ ವ್ಯವಸ್ಥೆಯನ್ನು ಸರಿಯಾದ ದಾರಿಗೆ ತರಲು ಏಕೈಕ ಮಾರ್ಗವೆಂದರೆ ಸರ್ಕಾರವನ್ನು ಆಯ್ಕೆ ಮಾಡಲು ಜನರ ಒಪ್ಪಿಗೆ ಕೇಳುವುದಾಗಿದೆ ಎಂದರು.

