ಹೊಸದಿಗಂತ ಡಿಜಿಟಲ್ ಡೆಸ್ಕ್:
ಏಷ್ಯನ್ ಬಿಲ್ಲುಗಾರಿಕೆ ಚಾಂಪಿಯನ್‌ಶಿಪ್‌ನಲ್ಲಿ ಭಾರತವು ಗುರುವಾರ ಮೂರು ಚಿನ್ನ ಮತ್ತು ಎರಡು ಬೆಳ್ಳಿ ಪದಕಗಳನ್ನು ಗೆದ್ದಿದೆ.
ಮಹಿಳೆಯರ ವಿಭಾಗದಲ್ಲಿ ದೀಪ್ಶಿಕಾ, ಜ್ಯೋತಿ ಸುರೇಖಾ ವೆನ್ನಂ ಮತ್ತು ಪ್ರತೀಕಾ ಪ್ರದೀಪ್ ಅವರಿದ್ದ ಕಾಂಪೌಂಡ್ ತಂಡ ಫೈನಲ್‌ನಲ್ಲಿ ದಕ್ಷಿಣ ಕೊರಿಯಾ ವಿರುದ್ಧ 236-234 ಅಂತರದ ಜಯ ಸಾಧಿಸಿ ಚಿನ್ನಕ್ಕೆ ಗುರಿಯಿಟ್ಟಿತು.
ಸೆಮಿಫೈನಲ್‌ನಲ್ಲಿ 234– 227 ರಿಂದ ಆತಿಥೇಯ ಬಾಂಗ್ಲಾದೇಶ ತಂಡವನ್ನು ಸೋಲಿಸಿತ್ತು. ಫೈನಲ್‌ನಲ್ಲಿಯೂ ಶ್ರೇಷ್ಠ ಪ್ರದರ್ಶನ ತೋರುವ ಮೂಲಕ ಚಿನ್ನಕ್ಕೆ ಕೊರಳೊಡ್ಡಿತು. ಮಹಿಳೆಯರ ವೈಯಕ್ತಿಕ ಫೈನಲ್‌ನಲ್ಲಿ ಜ್ಯೋತಿ 147-145 ಅಂಕಗಳಿಂದ ಪ್ರೀತಿಕಾ ಅವರನ್ನು ಸೋಲಿಸಿದರು.
ಪುರುಷರ ಕಾಂಪೌಂಡ್ ಸ್ಪರ್ಧೆಯಲ್ಲಿ, ಅಭಿಷೇಕ್ ವರ್ಮಾ, ಸಾಹಿಲ್ ಜಾಧವ್ ಮತ್ತು ಪ್ರಥಮೇಶ್ ಫುಗೆ ಅವರ ತಂಡವು ಚಿನ್ನದ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಕಜಕಿಸ್ತಾನ್ ವಿರುದ್ಧ 229-230 ಅಂಕಗಳಿಂದ ಸೋತು ಬೆಳ್ಳಿಗೆ ತೃಪ್ತಿಪಟ್ಟಿತು. ಸ್ಪರ್ಧೆಯುದ್ದಕ್ಕೂ ಉತ್ತಮ ಪ್ರದರ್ಶನ ತೋರಿದ ತಂಡ, ನಿರ್ಣಾಯಕ ಕ್ಷಣದಲ್ಲಿ ಕಜಕಿಸ್ತಾನ್ ತಂಡಕ್ಕೆ ಶರಣಾಯಿತು.
ಮಿಶ್ರ ತಂಡ ಫೈನಲ್‌ನಲ್ಲಿ ಅಭಿಷೇಕ್ ಮತ್ತು ದೀಪ್ಶಿಖಾ ಜೋಡಿ ಬಾಂಗ್ಲಾದೇಶದ ಹಿಮು ಬಚ್ಚರ್ ಮತ್ತು ಬೊನ್ನಾ ಅಕ್ತರ್ ಅವರನ್ನು 153-151 ಅಂಕಗಳಿಂದ ಸೋಲಿಸಿ ಚಿನ್ನ ಗೆದ್ದರು. ಕಾಂಪೌಂಡ್ ಬಿಲ್ಲುಗಾರಿಕೆಯಲ್ಲಿ ಭಾರತ ಐದು ಪದಕಗಳನ್ನು ಗೆದ್ದುಕೊಂಡಿತು, ಮಹಿಳೆಯರ ವೈಯಕ್ತಿಕ ಚಿನ್ನ ಮತ್ತು ಬೆಳ್ಳಿ, ಮಹಿಳಾ ತಂಡ ಚಿನ್ನ, ಮಿಶ್ರ ತಂಡ ಚಿನ್ನ ಮತ್ತು ಪುರುಷರ ತಂಡ ಬೆಳ್ಳಿ ಪದಕ ಗಳಿಸಿತು.

