ಹೊಸದಿಗಂತ ಆನ್ಲೈನ್ ಡೆಸ್ಕ್, ಮಂಗಳೂರು:
ಕರಾವಳಿ ಅಭಿವೃದ್ಧಿ ಪ್ರಾಧಿಕಾರವು ತನ್ನ ಕಾರ್ಯ ವ್ಯಾಪ್ತಿಗೆ ಬರುವ ಮೂರು ಜಿಲ್ಲೆಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಈ ಸಾಲಿನ ಆಯವ್ಯಯದಲ್ಲಿ ಪ್ರಾಧಿಕಾರದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಗರಿಷ್ಠ 35 ಕೋಟಿ ರೂ. ಅನುದಾನವನ್ನು ಕಾಯ್ದಿರಿಸಿದೆ. ಇನ್ನೂ 10 ಕೋಟಿ ರೂ. ಹೆಚ್ಚುವರಿ ಅನುದಾನವನ್ನು ಮುಂದಿನ ದಿನಗಳಲ್ಲಿ ಸರ್ಕಾರದ ಪೂರಕ ಆಯವ್ಯಯದಲ್ಲಿ ಬಿಡುಗಡೆ ಮಾಡುವ ನಿರೀಕ್ಷೆ ಇದೆ ಎಂದು ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ತಿಳಿಸಿದರು.
2020-21ನೇ ವಾರ್ಷಿಕ ಸಾಲಿನಲ್ಲಿ ಒಟ್ಟು 229 ಕಾಮಗಾರಿಗಳನ್ನು ಕೈಗೊಂಡಿದ್ದು, ಈ ಪೈಕಿ 151 ಕಾಮಗಾರಿಗಳನ್ನು ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಲಾಗಿದೆ. ಉಳಿದ 78 ಕಾಮಗಾರಿಗಳು ವಿವಿಧ ಹಂತದ ಪ್ರಗತಿಯಲ್ಲಿವೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಗ್ರಾಮೀಣ ಪ್ರದೇಶದಲ್ಲಿ ತೂಗು ಸೇತುವೆ, ಕಾಲುಸಂಕ ಕಿರುಸೇತುವೆ ನಿರ್ಮಾಣ, ಉತ್ತರ ಕನ್ನಡ, ಉಡುಪಿ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಶಾಲಾ ಕಟ್ಟಡ, ಶೌಚಾಲಯ, ಕುಡಿಯುವ ನೀರಿನ ಘಟಕ ಆವರಣ ಗೋಡೆ, ಅಂಗನವಾಡಿ ನಿರ್ಮಾಣ, ಕಾರ್ಕಳ ಥೀಂ ಪಾರ್ಕ್ ಅಭಿವೃದ್ಧಿ ಕಾಮಗಾರಿ, ನಗರ ಪ್ರದೇಶಗಳಲ್ಲಿ ಉದ್ಯಾನವನ ಅಭಿವೃದ್ಧಿ ಕಾಮಗಾರಿ, ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಜನರಿಗೆ ಅನುಕೂಲವಾಗುವಂತೆ ರಸ್ತೆ ಸಂಪರ್ಕ, ಬಸ್ ನಿಲ್ದಾಣ, ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಮಾರುಕಟ್ಟೆ ಹಾಗೂ ವಾಣಿಜ್ಯ ಸಂಕೀರ್ಣ ಕಟ್ಟಡ, ಸಮುದಾಯ ಭವನಗಳು, ರಂಗಮಂದಿರ, ರುದ್ರಭೂಮಿ ಇನ್ನಿತರ ವಿಭಿನ್ನ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದರು.
೨೦೨೨-೨೩ನೇ ಸಾಲಿನಲ್ಲಿ ಮುಲ್ಕಿ ತಾಲೂಕಿನಲ್ಲಿ ಶಾಂಭವಿ ನದಿಗೆ 1 ಕೋಟಿ ರೂ. ವೆಚ್ಚದಲ್ಲಿ ತೂಗುಸೇತುವೆ ನಿರ್ಮಾಣ, ಭಟ್ಕಳ ತಾಲೂಕು ಶಿರಾಲಿ ಗ್ರಾಮ ಪಂಚಾಯತ್‌ನ ಆಳ್ವೆಕೋಡಿ ತೆಂಗಿನಗುಂಡಿಯಲ್ಲಿ ಒಂದು ಕೋಟಿ ವೆಚ್ಚದಲ್ಲಿ ತೂಗುಸೇತುವೆ, ಪುತ್ತೂರಿನ ಬೆಟ್ಟಂಪಾಡಿಯಲ್ಲಿ 60 ಲಕ್ಷ ರೂ. ವೆಚ್ಚದಲ್ಲಿ ತೂಗುಸೇತುವೆ, ಸುಳ್ಯ ಕ್ಷೇತ್ರದ ಸವಣೂರು ಗ್ರಾಪಂ ಪಾಲ್ತಾಡಿಯ ಗೌರಿಹೊಳೆಗೆ 30 ಲಕ್ಷ ರೂ. ವೆಚ್ಚದಲ್ಲಿ ತೂಗುಸೇತುವೆ, ಕಾರ್ಕಳ ಬೈಲೂರಿನಲ್ಲಿ ಒಂದು ಕೋಟಿ ರೂ. ವೆಚ್ಚದಲ್ಲಿ ಪರಶುರಾಮ ಥೀಂ ಪಾರ್ಕ್ ಅಭಿವೃದ್ಧಿ, 25 ಲಕ್ಷ ವೆಚ್ಚದಲ್ಲಿ ಮನಪಾ ವ್ಯಾಪ್ತಿಯಲ್ಲಿ ದ.ಕ. ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ನ ಮೀನುಗಾರಿಕೆ ತರಬೇತಿ ಕೇಂದ್ರ, ಒಂದು ಕೋಟಿ ರೂ. ವೆಚ್ಚದಲ್ಲಿ ಬೆಳ್ತಂಗಡಿ ತಾಲೂಕು ಕ್ರೀಡಾಂಗಣ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ