ಹೊಸದಿಗಂತ ಮಡಿಕೇರಿ:
ಮನೆಯಲ್ಲಿ ಯಾರು ಇಲ್ಲದ ಸಮಯವನ್ನು ಸಾಧಿಸಿ ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳನ್ನು ಮಡಿಕೇರಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳಿಂದ ಬರೋಬ್ಬರಿ ₹8.50 ಲಕ್ಷ ನಗದು ಮತ್ತು 120 ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತ ಆರೋಪಿಗಳ ವಿವರ:
ಬಂಧಿತ ಆರೋಪಿಗಳನ್ನು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಸಿದ್ದಾಪುರ ಗ್ರಾಮದ ನಿವಾಸಿಗಳಾದ ಸಿದ್ದಲಿಂಗ.ಎನ್ (28) ಮತ್ತು ರಘು.ಎನ್ (26) ಎಂದು ಗುರುತಿಸಲಾಗಿದೆ.
ಕಳವು ನಡೆದಿದ್ದು ಹೇಗೆ?
ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಎಂ.ಚೆಂಬು ಗ್ರಾಮದ ನಿವಾಸಿ ಪಿ.ಪಿ. ವೀರಪ್ಪ ಎಂಬುವರ ಮನೆಯಲ್ಲಿ ನವೆಂಬರ್ 5ರಂದು ಕಳ್ಳತನ ನಡೆದಿತ್ತು. ಮನೆಯಲ್ಲಿ ಯಾರೂ ಇಲ್ಲದ ಸಂದರ್ಭವನ್ನು ಬಳಸಿಕೊಂಡ ಆರೋಪಿಗಳು, ರೂಮಿನಲ್ಲಿದ್ದ ಗಾಡ್ರೇಜ್‌ನ ಸಣ್ಣ ಕ್ಯಾಶ್ ಲಾಕರ್‌ನಲ್ಲಿದ್ದ ಅಂದಾಜು ₹15 ಸಾವಿರ ನಗದು ಮತ್ತು 120 ಗ್ರಾಂ ತೂಕದ ಚಿನ್ನಾಭರಣಗಳನ್ನು ಕಳವು ಮಾಡಿದ್ದರು. ಈ ಬಗ್ಗೆ ದೂರು ದಾಖಲಾಗಿತ್ತು.
ಪೊಲೀಸರ ವಿಶೇಷ ಕಾರ್ಯಾಚರಣೆ:
ಕಳ್ಳತನ ಪ್ರಕರಣದ ಬೆನ್ನಲ್ಲೇ ತನಿಖೆ ಕೈಗೊಂಡ ಮಡಿಕೇರಿ ಉಪ ವಿಭಾಗದ ಡಿವೈಎಸ್ಪಿ ಸೂರಜ್.ಪಿ.ಎ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು. ಮಡಿಕೇರಿ ಗ್ರಾಮಾಂತರ ಇನ್ಸ್‌ಪೆಕ್ಟರ್ ಚಂದ್ರಶೇಖರ್.ಹೆಚ್.ವಿ, ಸಿದ್ದಾಪುರ ಠಾಣಾಧಿಕಾರಿ ಮಂಜುನಾಥ್.ಈ ಮತ್ತು ಉಪವಿಭಾಗ ಮಟ್ಟದ ಅಪರಾಧ ಪತ್ತೆ ಹಾಗೂ ತಾಂತ್ರಿಕ ಸಿಬ್ಬಂದಿಗಳು ಈ ತಂಡದಲ್ಲಿದ್ದರು.
ತನಿಖಾ ತಂಡವು ತಂತ್ರಜ್ಞಾನ ಮತ್ತು ಸುಳಿವುಗಳ ಆಧಾರದ ಮೇಲೆ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದೆ. ಅಲ್ಲದೆ, ಕಳ್ಳತನ ಮಾಡಿದ್ದ ಚಿನ್ನಾಭರಣ ಮತ್ತು ನಗದನ್ನು ವಶಪಡಿಸಿಕೊಳ್ಳಲಾಗಿದೆ.
ಪೊಲೀಸರ ಈ ಯಶಸ್ವಿ ಕಾರ್ಯಾಚರಣೆಯ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಮಾಹಿತಿ ನೀಡಿದ್ದಾರೆ.

