ಹೊಸದಿಗಂತ ಡಿಜಿಟಲ್ ಡೆಸ್ಕ್:
ಸುಂಟಿಕೊಪ್ಪದ ರಾಮ ಬಡಾವಣೆಯ ಎಸ್.ಎಸ್ ಸೂಪರ್ ಮಾರ್ಕೆಟ್ ಮುಂಭಾಗದಲ್ಲಿ ದ್ವಿಚಕ್ರ ವಾಹನಗಳು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಎರಡೂ ವಾಹನಗಳಲ್ಲಿದ್ದ ನಾಲ್ವರು ಸವಾರರು ಗಂಭೀರವಾಗಿ ಗಾಯಗೊಂಡಿರುವ ದಾರುಣ ಘಟನೆ ವರದಿಯಾಗಿದೆ.
ಗದ್ದೆಹಳ್ಳದಿಂದ ಪಟ್ಟಣದ ಕಡೆಗೆ ಬರುತ್ತಿದ್ದ ಯಶ್ವಂತ್ ಎಂಬುವವರ ಸ್ಕೂಟರ್‌ಗೆ, ಸುಂಟಿಕೊಪ್ಪ ಪಟ್ಟಣದಿಂದ ಗದ್ದೆಹಳ್ಳದ ಕಡೆಗೆ ಹೋಗುತ್ತಿದ್ದ ಬೈಕ್ ವೇಗವಾಗಿ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ತೀವ್ರತೆಗೆ ಯಶ್ವಂತ್ ಅವರಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ತಕ್ಷಣ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತಕ್ಕೀಡಾದ ಸ್ಕೂಟರ್‌ನಲ್ಲಿ ಮೂವರು ಸವಾರಿ ಮಾಡುತ್ತಿದ್ದರು. ಈ ಮೂವರ ಪೈಕಿ ಇಬ್ಬರಿಗೆ ತೀವ್ರ ಗಾಯಗಳಾಗಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಮತ್ತೊಬ್ಬ ಗಾಯಾಳು ಮಡಿಕೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಪಘಾತದ ರಭಸಕ್ಕೆ ಸ್ಕೂಟರ್ ಮತ್ತು ಬೈಕ್ ಎರಡೂ ಸಂಪೂರ್ಣವಾಗಿ ಜಖಂಗೊಂಡಿದ್ದು, ಸ್ಥಳೀಯರು ತಕ್ಷಣವೇ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಸಹಾಯ ಮಾಡಿದ್ದಾರೆ. ಈ ಸಂಬಂಧ ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

