‘ಹರ್‌ ಘರ್‌ ತಿರಂಗಾ’ ಅಭಿಯಾನ: ಧ್ವಜ ಹಾರಿಸುವ ನಿಯಮ ಬದಲಿಸಿದ ಕೇಂದ್ರ ಸರಕಾರ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ‘ಹರ್‌ ಘರ್‌ ತಿರಂಗಾ’ ಅಭಿಯಾನ ಹಮ್ಮಿಕೊಂಡಿರುವ ಕೇಂದ್ರ ಸರಕಾರವು ಇದೀಗ ಮಹತ್ತರ ಬದಲಾವಣೆಯನ್ನು ಮಾಡಿಕೊಂಡಿದ್ದು, ಪ್ರತಿ ಮನೆಯ ಮೇಲೆ ತ್ರಿವರ್ಣ ಧ್ವಜ ಹಾರಿಸಲು ಅನುಕೂಲವಾಗುವಂತೆ 2002ರ ಧ್ವಜ ಸಂಹಿತೆಯಲ್ಲಿ ಮಾರ್ಪಾಡು ಮಾಡಲು ಮುಂದಾಗಿದೆ .

ಈ ಸಂಬಂಧ ಕೇಂದ್ರ ಗೃಹ ಸಚಿವಾಲಯ ಕಾರ್ಯದರ್ಶಿ ಅಜಯ್‌ ಭಲ್ಲಾ ಅವರು ಎಲ್ಲ ಸಚಿವಾಲಯದ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದು, ‘ಪ್ರಜೆಗಳು ಧ್ವಜ ಹಾರಿಸಲು ಉತ್ತೇಜಿಸುವ ಸಲುವಾಗಿ ಸಂಹಿತೆಯ ತಿದ್ದುಪಡಿ ಮುಖ್ಯವಾಗಿದೆ. ಆಗಸ್ಟ್‌ 13 ರಿಂದ 15ರವರೆಗೆ ‘ಆಜಾದಿ ಕಾ ಅಮೃತ ಮಹೋತ್ಸವ’ದ ಅಂಗವಾಗಿ ‘ಹರ್ ಘರ್ ತಿರಂಗ’ (ಪ್ರತಿಯೊಬ್ಬರ ಮನೆಯಲ್ಲಿ ತ್ರಿವರ್ಣ ಧ್ವಜ) ಅಭಿಯಾನವು ನಡೆಯಲಿದೆ. 30 ಕೋಟಿ ಮನೆಗಳ ಮೇಲೆ ತ್ರಿವರ್ಣ ಧ್ವಜ ಹಾರಬೇಕೆನ್ನುವ ಇಚ್ಛೆಯನ್ನು ಕೇಂದ್ರ ಸರಕಾರವು ಹೊಂದಿದೆ. ಸೂಕ್ತ ತಿದ್ದುಪಡಿ ನಂತರ, ಧ್ವಜವನ್ನು ಮುಕ್ತ ಆವರಣದಲ್ಲಿ ಅಥವಾ ಮನೆಯ ನಿವಾಸಿಯೊಬ್ಬರು ತಾರಸಿ ಮೇಲೆ ಹಾರಿಸಬಹುದಾಗಿದೆ. ಹಗಲು, ರಾತ್ರಿ ಧ್ವಜ ಹಾರಾಡಲು ಅವಕಾಶ ನೀಡಲಾಗಿದೆ’.

2009ರಲ್ಲಿ ಕೂಡ ಆಗಿನ ಕೇಂದ್ರ ಸರಕಾರವು ತ್ರಿವರ್ಣ ಧ್ವಜವು ಹಗಲು, ರಾತ್ರಿ ಎನ್ನದೆಯೇ ಸಾರ್ವಜನಿಕ ಸ್ಥಳಗಳಲ್ಲಿನ ಬೃಹತ್‌ ಕಂಬಗಳ ಮೇಲೆ ದೇಶದ ಹೆಮ್ಮೆಯಾಗಿ ಹಾರಾಡುವಂತೆ ಅನುಮತಿ ನೀಡಿತ್ತು.

ಧ್ವಜ ಸಂಹಿತೆಯಲ್ಲಿನ ಬದಲಾವಣೆ ಪ್ರಕಾರ, ರಾಷ್ಟ್ರಧ್ವಜವನ್ನು ರಾತ್ರಿ ಕೂಡ ಹಾರಿಸಬಹುದಾಗಿದೆ. ಯಂತ್ರದಿಂದ ತಯಾರಿಸಿದ ಹಾಗೂ ಪಾಲಿಸ್ಟರ್ ಧ್ವಜಗಳನ್ನು ಕೂಡ ಬಳಸಲು ಅನುಮತಿ ನೀಡಲಾಗಿದೆ. ಈ ಹಿಂದೆ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಮಾತ್ರ ತ್ರಿವರ್ಣ ಧ್ವಜ ಹಾರಿಸಲು ಅನುಮತಿ ನೀಡಲಾಗಿತ್ತು. ಸೂರ್ಯಾಸ್ತಕ್ಕೂ ಮುನ್ನ ತ್ರಿವರ್ಣ ಧ್ವಜವನ್ನು ಕೆಳಕ್ಕೆ ಇಳಿಸಬೇಕಿತ್ತು. ಹಾಗೆಯೇ ಯಂತ್ರದಿಂದ ತಯಾರು ಮಾಡಿದ ಮತ್ತು ಪಾಲಿಸ್ಟರ್ ಧ್ವಜಗಳನ್ನು ಬಳಸಲು ಅನುಮತಿ ಇರಲಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!