ಹೊಸದಿಗಂತ ಡಿಜಿಟಲ್ ಡೆಸ್ಕ್:
ಲಡಾಖ್‌ನ ಹಿಮಾಚ್ಛಾದಿತ ಗಿರಿಶಿಖರಗಳ ಮಧ್ಯೆ, ಭಾರತ ತನ್ನ ಭದ್ರತಾ ಸಾಮರ್ಥ್ಯವನ್ನು ಮತ್ತೊಂದು ಹಂತಕ್ಕೆ ಏರಿಸುವ ಮಹತ್ವದ ಹೆಜ್ಜೆ ಇಟ್ಟಿದೆ. ಚೀನಾದೊಂದಿಗೆ ಉದ್ವಿಗ್ನತೆ ಇಳಿಕೆಯಾಗಿದ್ದರೂ, ಗಡಿ ಭದ್ರತೆಯಲ್ಲಿ ಯಾವುದೇ ಅಲಕ್ಷ್ಯವನ್ನೂ ಬೇಡವೆಂದಿರುವ ಕೇಂದ್ರ ಸರ್ಕಾರ, ವಿಶ್ವದಲ್ಲೇ ಅತಿ ಎತ್ತರದ ವಾಯುನೆಲೆಗಳಲ್ಲಿ ಒಂದಾದ ನಿಯೋಮಾ ವಾಯುನೆಲೆಯನ್ನು ಸಂಪೂರ್ಣವಾಗಿ ಕಾರ್ಯನಿರ್ವಹಣೆಗೆ ತೆರೆದಿದೆ. ಈ ವಾಯುನೆಲೆಯನ್ನು ಭಾರತೀಯ ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಎ.ಪಿ. ಸಿಂಗ್ ಉದ್ಘಾಟಿಸಿದರು.
ದೆಹಲಿಯಿಂದ ನೇರವಾಗಿ ಸಿ-130ಜೆ ಸೂಪರ್ ಹರ್ಕ್ಯುಲಸ್ ವಿಮಾನವನ್ನು ಚಲಾಯಿಸಿ ನಿಯೋಮಾಗೆ ಬಂದಿಳಿದ ಸಿಂಗ್, ಹೊಸ ವಾಯುನೆಲೆಯ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಿದರು. ಮೊದಲಿಗೆ ಯುದ್ಧವಿಮಾನಗಳ ತಾತ್ಕಾಲಿಕ ಇಳಿಯುವ ಸ್ಥಳವಾಗಿದ್ದ ಇದು, ಈಗ ಸಂಪೂರ್ಣ ಸಿದ್ಧತೆಯೊಂದಿಗೆ ಶಾಶ್ವತ ವಾಯುನೆಲೆಯಾಗಿ ಸೇವೆ ಸಲ್ಲಿಸಲು ರೂಪುಗೊಂಡಿದೆ.
13710 ಅಡಿ ಎತ್ತರದಲ್ಲಿರುವ ನಿಯೋಮಾ, ಎಲ್‌ಎಸಿ ಯಿಂದ ಕೇವಲ 35 ಕಿಮೀ ದೂರದಲ್ಲಿರುವುದರಿಂದ ವ್ಯೂಹಾತ್ಮಕವಾಗಿ ಅಪಾರ ಮಹತ್ವ ಪಡೆದುಕೊಂಡಿದೆ. ಗಲ್ವಾನ್ ಸಂಘರ್ಷ ನಂತರ ಚೀನಾ ತನ್ನ ಗಡಿಯಲ್ಲಿರುವ ವಾಯುನೆಲೆಗಳನ್ನು ವೇಗವಾಗಿ ವಿಸ್ತರಿಸಿದೆ. ಇದಕ್ಕೆ ಪ್ರತಿಯಾಗಿ ಭಾರತವೂ ತನ್ನ ರಕ್ಷಣಾ ಮೂಲಸೌಕರ್ಯವನ್ನು ಬಲಪಡಿಸುವ ದಾರಿಯಲ್ಲಿ ಮುಂದಾಗಿದೆ.
230 ಕೋಟಿ ರೂ. ವೆಚ್ಚದಲ್ಲಿ ವಾಯುನೆಲೆಯ ಏರ್‌ಸ್ಟ್ರಿಪ್ ಅನ್ನು 2.7 ಕಿಮೀ ವರೆಗೆ ವಿಸ್ತರಿಸಿ, ಭಾರವಾದ ಯುದ್ಧವಿಮಾನಗಳು ಸಹ ಇಳಿಯಬಲ್ಲ ರನ್‌ವೇ ನಿರ್ಮಿಸಲಾಗಿದೆ. ಹೊಸ ATC ಸಂಕೀರ್ಣ, ಕ್ರಾಶ್ ಬೇ ಮತ್ತು ವಸತಿ ಸೌಕರ್ಯಗಳನ್ನು ಸೇರಿಸಿ, ವಾಯುಪಡೆಯ ಕಾರ್ಯಾಚರಣೆಗಳಿಗೆ ಅಗತ್ಯವಿರುವ ಎಲ್ಲಾ ಮೂಲಸೌಕರ್ಯ ನಿರ್ಮಿಸಲಾಗಿದೆ.
ಪ್ರಾರಂಭಿಕ ಹಂತದಲ್ಲಿ ಲಡಾಖ್‌ನ ಇತರೆ ಪ್ರದೇಶಗಳಿಗೆ ಶಸ್ತ್ರಾಸ್ತ್ರ ಮತ್ತು ಲಾಜಿಸ್ಟಿಕ್ ಪೂರೈಕೆಗಾಗಿ ಇದನ್ನು ಬಳಸಲಾಗುತ್ತಿದ್ದು, 2026ರಿಂದ ಪ್ರಮುಖ ಕಾರ್ಯಾಚರಣೆಗಳು ಆರಂಭವಾಗಲಿವೆ. ಗಡಿ ಭದ್ರತೆ ಮತ್ತು ವ್ಯೂಹಾತ್ಮಕ ಸಾಮರ್ಥ್ಯವನ್ನು ಇನ್ನಷ್ಟು ಬಲಪಡಿಸುವ ಹೊಸ ಮೈಲಿಗಲ್ಲಾಗಿ ನಿಯೋಮಾ ವಾಯುನೆಲೆ ಹೊರಹೊಮ್ಮಿದೆ.

