Friday, November 14, 2025

ಕರಾವಳಿಯಲ್ಲಿ ಶಾಕಿಂಗ್ ಘಟನೆ: ಕಣ್ಣು ಗುಡ್ಡೆ ಕಿತ್ತೋದ ಸ್ಥಿತಿಯಲ್ಲಿ ವ್ಯಕ್ತಿಯ ನಿಗೂಢ ಸಾವು: ಸ್ಥಳಕ್ಕೆ ಪೊಲೀಸ್ ದೌಡು

ಹೊಸದಿಗಂತ ವರದಿ ಉಳ್ಳಾಲ:

ಕಣ್ಣಿನ ಗುಡ್ಡೆ ಕಿತ್ತೋದ ಸ್ಥಿತಿಯಲ್ಲಿ ಭೀಕರ ದಾಳಿಗೊಳಗಾಗಿ ನಿಗೂಢವಾಗಿ ಸಾವನ್ನಪ್ಪಿರುವ ವ್ಯಕ್ತಿಯೋರ್ವನ ಮೃತದೇಹವು ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ಠಾಣೆಯ ಕುಂಪಲ ಬೈಪಾಸ್ ಎಂಬಲ್ಲಿನ ಮನೆಯೊಂದರ ಅಂಗಳದಲ್ಲಿ ಸಿಕ್ಕಿದ್ದು, ಕೊಲೆಯೋ ಅಥವಾ ನಾಯಿ ದಾಳಿಯಿಂದ ವ್ಯಕ್ತಿ ಮೃತಪಟ್ಟಿರುವ ಬಗ್ಗೆ ಶಂಕೆ ಮೂಡಿದೆ.

ಕುಂಪಲ ಮೂರುಕಟ್ಟೆ ನಿವಾಸಿ ದಯಾನಂದ ಗಟ್ಟಿ (53) ನಿಗೂಢವಾಗಿ ಸಾವನ್ನಪ್ಪಿರುವ ವ್ಯಕ್ತಿ.

ಕುಂಪಲ ಬೈಪಾಸಿನ ಸಾಯಿ ಲಾಂಡ್ರಿಯ ಸಿಟ್ ಔಟ್ ನಲ್ಲಿ ನೋಟಿನ ಕಂತೆ ಬಿದ್ದಿದ್ದು ರಕ್ತ ಚೆಲ್ಲಿದೆ. ನೋಟಿನ ಕಂತೆಯ ಬಳಿಯೇ ದಯಾನಂದ್ ಅವರ ಒಂದು ಕಣ್ಣಿನ ಗುಡ್ಡೆ ಬಿದ್ದಿದೆ.

ಲಾಂಡ್ರಿ ಎದುರಲ್ಲೇ ದಯಾನಂದ್ ಮೇಲೆ ‘ದಾಳಿ’:
ಇಂದು ಬೆಳಿಗ್ಗೆ ದಯಾನಂದ್ ಸಾಯಿ ಲಾಂಡ್ರಿಯ ಎದುರಿನ ಖೈರುನ್ನೀಸ ಎಂಬವರ ಮನೆಯ ಅಂಗಳದಲ್ಲಿ ಜೀವನ್ಮರಣ ಹೋರಾಟದಲ್ಲಿ ರಕ್ತದ ಮಡುವಲ್ಲಿ ಬಿದ್ದಿದ್ದರೆನ್ನಲಾಗಿದೆ. ಪಕ್ಕದಲ್ಲೇ ಮುಖಕ್ಕೆ ರಕ್ತ ಲೇಪಿಸಿದ್ದ ಬೀದಿ ನಾಯಿಯೊಂದು ಇದ್ದು ಜನರನ್ನ ಕಂಡು ಓಡಿ ಹೋಗಿದೆ. ಸ್ಥಳೀಯರು ಘಟನೆ ಬಗ್ಗೆ ಉಳ್ಳಾಲ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಬರುವಷ್ಟರಲ್ಲಿ ದಯಾನಂದ್ ಸಾವನ್ನಪ್ಪಿದ್ದರು.

ದಯಾನಂದ್ ಅವರ ಮೂಗಿನ ಎಡ ಭಾಗ ಮತ್ತು ಎಡ ಕಣ್ಣಿನ ಗುಡ್ಡೆ ಕಿತ್ತೋಗಿದ್ದು ಮುಖದ ಎಡ ಭಾಗವೇ ಜರ್ಜರಿತವಾಗಿದೆ.

ಘಟನಾ ಸ್ಥಳಕ್ಕೆ ದೇರಳಕಟ್ಟೆ ಕೆ.ಎಸ್ ಹೆಗ್ಡೆ ಆಸ್ಪತ್ರೆಯ ಡಾ. ಮಹಾಬಲ ಶೆಟ್ಟಿ ನೇತೃತ್ವದ ಫಾರೆನ್ಸಿಕ್ ಮತ್ತು ಸೋಕೊ ತಂಡ ಭೇಟಿ ನೀಡಿದ್ದು ಪರಿಶೀಲನೆ ನಡೆಸಿ ಸಾಕ್ಷ ಕಲೆ ಹಾಕಿದೆ. ಮೇಲ್ನೋಟಕ್ಕೆ ಪ್ರಾಣಿ ದಾಳಿಯಿಂದಲೇ ದಯಾನಂದ್ ಸಾವನ್ನಪ್ಪಿರೋದಾಗಿ ಹೇಳಲಾಗುತ್ತಿದ್ದು ಪೊಲೀಸರು ಸಿಸಿ ಕ್ಯಾಮೆರಗಳನ್ನೂ ಪರಶೀಲನೆ ನಡೆಸಿದ್ದಾರೆ. ಪೊಲೀಸರ ತನಿಖೆಯಿಂದಷ್ಟೆ ಸತ್ಯಾಂಶ ಬೆಳಕಿಗೆ ಬರಲಿದೆ.

ಕುಂಪಲ ಪ್ರದೇಶದಲ್ಲಿ ಬೀದಿನಾಯಿಗಳ ಹಾವಳಿ ಮಿತಿ ಮೀರಿದ್ದು ಈ ಬಗ್ಗೆ ಸ್ಥಳೀಯ ಪುರಸಭಾ ಸದಸ್ಯರಾದ ಮನೋಜ್ ಕಟ್ಟೆಮನೆ ಅವರು ಸೋಮೇಶ್ವರ ಪುರಸಭೆಯ ಸಾಮಾನ್ಯ ಸಭೆಯಲ್ಲೂ ಧ್ವನಿ ಎತ್ತಿದ್ದರು. ಘಟನಾ ಸ್ಥಳಕ್ಕೆ ಡಿಸಿಪಿ ಮಿಥುನ್ ಹೆಚ್.ಎನ್., ಎಸಿಪಿ ವಿಜಯ ಕ್ರಾಂತಿ,ಇನ್ಸ್ ಪೆಕ್ಟರ್ ವಿರೂಪಾಕ್ಷ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ದಯಾನಂದ್ ಅವರು ಅವಿವಾಹಿತರಾಗಿದ್ದು ಸಣ್ಣ ಪುಟ್ಟ ಕೂಲಿ ಕೆಲಸ ಮಾಡುತ್ತಿದ್ದು, ಕುಡಿತದ ಚಟಕ್ಕೆ ಬಲಿಯಾಗಿದ್ದರು. ಇಂದು ನಸುಕಿನ ಜಾವ ಮೂರುವರೆ ಗಂಟೆಯವರೆಗೆ ದಯಾನಂದ್ ಬೈಪಾಸ್ ಜಂಕ್ಷನ್ ನಲ್ಲೇ ಇದ್ದುದನ್ನ ಸ್ಥಳೀಯ ಹಾಲಿನ ಡೈರಿಯ ಮಾಲಕರು ನೋಡಿದ್ದಾರೆ. ಮೃತ ದಯಾನಂದ್ ಇಬ್ಬರು ಸಹೋದರ,ಇಬ್ಬರು ಸಹೋದರಿಯನ್ನ ಅಗಲಿದ್ದಾರೆ.

error: Content is protected !!