ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದ ಭವಿಷ್ಯ ರೂಪಿತ ಆಗುವುದು ವೈಚಾರಿಕ – ವೈಜ್ಞಾನಿಕ ಮನೋಭಾವದ ಮಕ್ಕಳಿಂದ. ಆದ್ದರಿಂದ ಮಕ್ಕಳು ಪ್ರಾಥಮಿಕ ಶಿಕ್ಷಣದಿಂದಲೇ ಮೌಢ್ಯ, ಕಂದಾಚಾರದಿಂದ ದೂರ ಉಳಿಯಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಹೇಳಿದ್ದಾರೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಬ್ಯಾಂಕ್ವೆಟ್ ಹಾಲ್ ನಲ್ಲಿ ಪಂಡಿತ್ ಜವಾಹರಲಾಲ್ ಜನ್ಮ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ “ರಾಜ್ಯ ಮಟ್ಟದ ಮಕ್ಕಳ ದಿನಾಚರಣೆ ಮತ್ತು ಪೋಷಕರ-ಶಿಕ್ಷಕರ ಮಹಾಸಭೆ” ಕಾರ್ಯಕ್ರಮವನ್ನು ಉದ್ಘಾಟಿಸಿ ಮುಖ್ಯಮಂತ್ರಿಗಳು ಮಾತನಾಡಿದರು.
ಮಕ್ಕಳೇ ಭಾರತದ ಭವಿಷ್ಯ ಎನ್ನುವ ದೂರದೃಷ್ಟಿ ನೆಹರೂ ಅವರಿಗೆ ಇತ್ತು. ಹೀಗಾಗಿ ಮಕ್ಕಳಲ್ಲಿ ವೈಜ್ಞಾನಿಕ ಮನೋಧರ್ಮ ರೂಪಿಸುವ ಶಿಕ್ಷಣಕ್ಕೆ ಒತ್ತು ನೀಡಿದ್ದರು. ನಮ್ಮ ಸರ್ಕಾರ ಕೂಡ ಶಿಕ್ಷಣಕ್ಕೆ ಪ್ರಥಮ ಆಧ್ಯತೆ ನೀಡಿದ್ದು, 65,000 ಕೋಟಿ ರೂಪಾಯಿಗಳನ್ನು ಶಿಕ್ಷಣಕ್ಕೆ ನೀಡುತ್ತಿದ್ದೇವೆಂದು ಹೇಳಿದರು.
ನೆಹರೂ ತಮ್ಮ ಯೌವ್ವನದ 3,200ಕ್ಕೂ ಹೆಚ್ಚು ದಿನಗಳನ್ನು ಜೈಲಿನಲ್ಲಿ ಕಳೆದ ಹೋರಾಟಗಾರ. ಅತೀ ಶ್ರೀಮಂತ ಕುಟುಂಬದಿಂದ ಬಂದಿದ್ದರೂ ದೇಶದ ಸ್ವಾತಂತ್ರ್ಯಕ್ಕಾಗಿ ಸೆರೆಮನೆ ಸೇರಿದರು. ದೇಶದ ಪ್ರಧಾನಿಯಾಗಿ ಕೃಷಿ, ವಿಜ್ಞಾನ, ನೀರಾವರಿ, ತಂತ್ರಜ್ಞಾನ ಸೇರಿ ದೇಶದ ಸಮಗ್ರ ಅಭಿವೃದ್ಧಿಗೆ ಅಡಿಪಾಯ ಹಾಕಿದರು. ಐಐಟಿ, ಏಮ್ಸ್ ಸೇರಿ ಅಣೆಕಟ್ಟು, ಕೈಗಾರಿಕೆಗಳನ್ನೆಲ್ಲಾ ಮಾಡಿದ್ದು ನೆಹರೂ. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸದೆ ಬ್ರಿಟಿಷರ ಜೊತೆ ಕೈಜೋಡಿಸಿದ್ದವರು ನೆಹರೂ ಮತ್ತು ಗಾಂಧಿಯನ್ನು ಟೀಕಿಸುತ್ತಾರೆ. ಇದನ್ನು ಮಕ್ಕಳಿಗೆ ಶಿಕ್ಷಕರು ಹಾಗೂ ಪೋಷಕರು ಅರ್ಥ ಮಾಡಿಸಬೇಕು ಎಂದರು.

