February 26, 2026
Thursday, February 26, 2026
spot_img

ಅಗ್ನಿದುರಂತ: ದುಷ್ಕೃತ್ಯದ ಬಗ್ಗೆ ತನಿಖೆ ಮಾಡ್ತೇವೆ; ಸಚಿವ ಶಿವಾನಂದ ಪಾಟೀಲ

ಹೊಸದಿಗಂತ ವರದಿ ಬಾಗಲಕೋಟೆ:

ಮುಧೋಳ ತಾಲ್ಲೂಕಿನ ಸಮೀರವಾಡಿಯ ಗೋದಾವರಿ ಬಯೋ ರಿಫೈನರೀಸ್‌ ಲಿಮಿಟೆಡ್‌ ಬಳಿ ಗುರುವಾರ ನಡೆದ ಘಟನೆಯಲ್ಲಿ ಸಂಭವಿಸಿದ ಹಾನಿಗೆ ಸಾಧ್ಯವಿರುವ ಪರಿಹಾರ ನೀಡಲಾಗುವುದು ಹಾಗೂ ದುರಂತದ ಬಗ್ಗೆ ತನಿಖೆಗೆ ಆದೇಶ ಮಾಡಲಾಗುವುದು ಎಂದು ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಸಚಿವ ಶಿವಾನಂದ ಪಾಟೀಲ ಹೇಳಿದ್ದಾರೆ.

ದುರಂತದ ಸ್ಥಳಕ್ಕೆ ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವ ಆರ್.‌ಬಿ. ತಿಮ್ಮಾಪುರ ಅವರೊಂದಿಗೆ ಭೇಟಿ ನೀಡಿ ದುರಂತದಲ್ಲಿ ಹಾನಿಗೀಡಾದ ಕಬ್ಬು, ಟ್ರ್ಯಾಕ್ಟರ್‌ಗಳು, ಬೈಕ್‌ಗಳನ್ನು ವೀಕ್ಷಣೆ ಮಾಡಿ ರೈತರ ಅಹವಾಲುಗಳನ್ನು ಆಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಉಪವಿಭಾಗಾಧಿಕಾರಿ ನೇತೃತ್ವದ ಅಧಿಕಾರಿಗಳ ತಂಡ ಹಾನಿಯ ಪ್ರಮಾಣದ ಸಮೀಕ್ಷೆ ಆರಂಭಿಸಿದೆ. ಎಷ್ಟು ಪರಿಹಾರ ನೀಡಬೇಕು ಎಂಬ ಬಗ್ಗೆ ಇನ್ನೂ ತೀರ್ಮಾನಿಸಿಲ್ಲ. ಎಷ್ಟು ಸಾಧ್ಯವಿದೆಯೋ ಅಷ್ಟು ಪರಿಹಾರವನ್ನು ಸರ್ಕಾರದಿಂದ ಇಲ್ಲವೇ ಬೆಳಗಾವಿಯ ಎಸ್‌. ನಿಜಲಿಂಗಪ್ಪ ಸಂಸ್ಥೆಯಿಂದ ನೀಡಲಾಗುವುದು ಎಂದರು.

ದುಷ್ಕೃತ್ಯವನ್ನು ಖಂಡಿಸಿದ ಸಚಿವರು ಘಟನೆಯ ಬಗ್ಗೆ ತನಿಖೆಗೆ ಆದೇಶ ಮಾಡಲಾಗಿದ್ದು, ತಪ್ಪಿತಸ್ಥರು ಯಾರೇ ಇರಲಿ, ಅವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.

ಸರ್ಕಾರ ಕಬ್ಬು ಬೆಳೆಗಾರರ ಹಿತರಕ್ಷಣೆಗೆ ಬದ್ಧವಾಗಿದ್ದರಿಂದಲೇ ಈ ಹಂಗಾಮಿನಲ್ಲಿ ಇಳುವರಿ ಲೆಕ್ಕಾಚಾರ ಮಾಡದೆ ಪ್ರತಿ ಟನ್‌ ಕಬ್ಬಿಗೆ ಸರಾಸರಿ 200ರಿಂದ 250 ರೂ. ಹೆಚ್ಚುವರಿ ಕೊಡಿಸಲು ಸಫಲವಾಗಿದೆ. ಸಕ್ಕರೆ ಕಾರ್ಖಾನೆಗಳು ಹೆಚ್ಚಿನ ಲಾಭ ಗಳಿಸಿದರೆ ರಂಗರಾಜನ್‌ ಸಮಿತಿಯ ವರದಿ ಪ್ರಕಾರ ಬೆಳೆಗಾರರಿಗೆ 70:30 ಅನುಪಾತದಲ್ಲಿ ಹಂಚಿಕೆ ಮಾಡಲಾಗುವುದು ಎಂದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !