July 8, 2026
Wednesday, July 8, 2026
spot_img

ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ವೀರ ಸಾವರ್ಕರ್ ಭಾವಚಿತ್ರ ಪ್ರತಿಷ್ಠಾಪನೆಗೆ ಪ್ರಮೋದ್ ಮುತಾಲಿಕ್ ಆಗ್ರಹ!

ಹೊಸದಿಗಂತ ವರದಿ ಬೆಳಗಾವಿ:

ಬೆಳಗಾವಿ: ಸ್ವಾತಂತ್ರ್ಯ ವೀರ ವಿನಾಯಕ ದಾಮೋದರ್ ಸಾವರ್ಕರ್ ಅವರು ಹಿಂಡಲಗಾ ಜೈಲಿನಲ್ಲಿದ್ದ ನೆನಪಿಗಾಗಿ ಅವರ ಭವ್ಯ ಭಾವಚಿತ್ರ ಹಾಗೂ ನಾಮಫಲಕವನ್ನು ರಾಜ್ಯ ಸರ್ಕಾರ ತಕ್ಷಣವೇ ಪ್ರತಿಷ್ಠಾಪಿಸಬೇಕು ಎಂದು ಶ್ರೀರಾಮ್ ಸೇನೆ ಸಂಸ್ಥಾಪಕ ಹಾಗೂ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರು ಬಲವಾಗಿ ಒತ್ತಾಯಿಸಿದ್ದಾರೆ.

ಬುಧವಾರ ಬೆಳಗಾವಿ ನಗರದ ಸರ್ಕಿಟ್ ಹೌಸ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ  ಮಾತನಾಡಿದ ಅವರು, ಜುಲೈ 13 ರಂದು ಜೈಲಿನ ಮುಂಭಾಗ ಬೃಹತ್ ಮನವಿ ಸಲ್ಲಿಸಲಾಗುವುದ ಮೂಲಕ  ಸ್ವಾತಂತ್ರ್ಯ ವೀರ ಸಾವರ್ಕರ್ ಅವರು ಜೈಲಿನಿಂದ ಬಿಡುಗಡೆಯಾದ ಐತಿಹಾಸಿಕ ದಿನ. ಅಂದೇ ಹಿಂಡಲಗಾ ಕೇಂದ್ರ ಕಾರಾಗೃಹದ ಎದುರು ಸಾವರ್ಕರ್ ಅವರ ಭಾವಚಿತ್ರವನ್ನು ಇಟ್ಟು, ಅಲ್ಲಿ ಅವರ ಸ್ಮರಣೆ ಮಾಡುವ ಮೂಲಕ ರಾಜ್ಯ ಸರ್ಕಾರಕ್ಕೆ ಅಧಿಕೃತವಾಗಿ ಮನವಿ ಸಲ್ಲಿಸಲಾಗುವುದು,” ಎಂದು ತಿಳಿಸಿದರು.

ಶ್ರೀರಾಮ್ ಸೇನೆಯ ಪ್ರಮುಖ ಬೇಡಿಕೆಗಳು:

ಭಾವಚಿತ್ರ ಮತ್ತು ನಾಮಫಲಕ: ಹಿಂಡಲಗಾ ಜೈಲಿನಲ್ಲಿ ಸಾವರ್ಕರ್ ಅವರ ಭಾವಚಿತ್ರದೊಂದಿಗೆ ಸ್ಮರಣಾರ್ಥ ನಾಮಫಲಕವನ್ನು ಅಳವಡಿಸಬೇಕು.

ಜಯಂತಿ ಆಚರಣೆ: ಸರ್ಕಾರಿ ಮಟ್ಟದಲ್ಲಿ ಸಾವರ್ಕರ್ ಅವರ ಜಯಂತಿಯನ್ನು ಕಡ್ಡಾಯವಾಗಿ ಆಚರಿಸಬೇಕು.

ವಿಮಾನ ನಿಲ್ದಾಣಕ್ಕೆ ನಾಮಕರಣ: ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಸಾವರ್ಕರ್ ಅವರ ಹೆಸರಿನ ನಾಮಫಲಕವನ್ನು ಅಳವಡಿಸಬೇಕು.

ಪಠ್ಯಪುಸ್ತಕದಲ್ಲಿ ಸೇರ್ಪಡೆ: ಶಾಲಾ ವಿದ್ಯಾರ್ಥಿಗಳಿಗೆ ದೇಶಭಕ್ತಿಯ ಪಾಠ ಕಲಿಸಲು ಪಠ್ಯಪುಸ್ತಕಗಳಲ್ಲಿ ಸಾವರ್ಕರ್ ಅವರ ಜೀವನ ಚರಿತ್ರೆ ಮತ್ತು ಹೋರಾಟದ ಗಾಥೆಯನ್ನು ಅಳವಡಿಸಬೇಕು.

“ಸ್ವಾತಂತ್ರ್ಯ ವೀರ ವಿನಾಯಕ ಸಾವರ್ಕರ್ ಅವರನ್ನು ಬ್ರಿಟಿಷರು ಅಂಡಮಾನ್ ನಿಕೋಬಾರ್ ಜೈಲಿಗೆ ಕರೆದೊಯ್ಯುವಾಗ ಅವರು ಹಡಗಿನಿಂದ ಸಮುದ್ರಕ್ಕೆ ಜಿಗಿದ ದಿನ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆಯುವಂಥದ್ದು. ಅಷ್ಟೇ ಅಲ್ಲದೆ, 1950ರ ದಶಕದಲ್ಲಿ ಅಂದಿನ ನೆಹರು ನೇತೃತ್ವದ ಕೇಂದ್ರ ಸರ್ಕಾರವು ಸಾವರ್ಕರ್ ಅವರನ್ನು ಮೂರು ತಿಂಗಳುಗಳ ಕಾಲ ಇದೇ ಹಿಂಡಲಗಾ ಜೈಲಿನಲ್ಲಿ ಗೃಹಬಂಧನದಲ್ಲಿ ಇಟ್ಟಿತ್ತು. ಈ ಹಿನ್ನೆಲೆಯಲ್ಲಿ ಈ ಜಾಗಕ್ಕೆ ಐತಿಹಾಸಿಕ ಮಹತ್ವವಿದೆ,” ಎಂದು ಮುತಾಲಿಕ್ ಇತಿಹಾಸದ ಪುಟಗಳನ್ನು ನೆನಪಿಸಿದರು.

ಕಾಂಗ್ರೆಸ್ ವಿರುದ್ಧ ಮುತಾಲಿಕ್ ತೀವ್ರ ವಾಗ್ದಾಳಿ: 

ಕಾಂಗ್ರೆಸ್ ಪಕ್ಷದ ಇತಿಹಾಸ ಮತ್ತು ಸಿದ್ಧಾಂತಗಳ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ ಮುತಾಲಿಕ್, “ಕಾಂಗ್ರೆಸ್ ಸರ್ಕಾರ ಎಂದಿಗೂ ದೇಶದ ನಿಜವಾದ ಕ್ರಾಂತಿಕಾರಿಗಳ ಪರವಾಗಿ ನಿಲ್ಲಲಿಲ್ಲ. ಸರ್ದಾರ್ ವಲ್ಲಭಭಾಯಿ ಪಟೇಲ್, ವೀರ ಸಾವರ್ಕರ್ ಅವರಂತಹ ಮಹನೀಯರನ್ನು ಅವರು ನಿರ್ಲಕ್ಷಿಸಿದರು. ಕೇವಲ ಶಾಂತಿಯ ಹೆಸರಿನಲ್ಲಿ ಮಹಾತ್ಮಾ ಗಾಂಧೀಜಿಯವರನ್ನು ಬಿಟ್ಟರೆ ಬೇರೆ ಯಾವ ನಾಯಕರನ್ನೂ ಅವರು ಮುಂದೆ ಬರಲು ಬಿಡಲಿಲ್ಲ,” ಎಂದು ಹರಿಹಾಯ್ದರು.

ಮುಂದುವರಿದು ಮಾತನಾಡಿದ ಅವರು, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೂ ಕಾಂಗ್ರೆಸ್ ಅನ್ಯಾಯ ಮಾಡಿದೆ ಎಂದು ಗಂಭೀರ ಆರೋಪ ಮಾಡಿದರು. “ಅಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷವು ಡಾ. ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸುವ ಸಂಚು ರೂಪಿಸಿತ್ತು. ಅವರು ಮೃತಪಟ್ಟ ಬಳಿಕ ದೆಹಲಿಯಲ್ಲಿ ಅವರ ಅಂತ್ಯಕ್ರಿಯೆ ನಡೆಸಲು ಕನಿಷ್ಠ ಜಾಗವನ್ನೂ ಕೊಡಲಿಲ್ಲ. ಆದರೆ ಇಂದು ಅದೇ ಕಾಂಗ್ರೆಸ್ ನಾಯಕರು ಅಂಬೇಡ್ಕರ್ ಹೆಸರಿನಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ,” ಎಂದು ತೀವ್ರವಾಗಿ ಟೀಕಿಸಿದರು.

ಇದನ್ನೂ ಓದಿ;

 ಈ ವೇಳೆ ಶ್ರೀರಾಮ್ ಸೇನೆಯ ಪ್ರಮುಖ ಮುಖಂಡ ವೆಂಕಟೇಶ ಶಿಂಧೆ, ವಿನಯ ಅಂಬೋಳಿ, ಬಾಳು ಪವಾರ್, ಸಾಮಾಜಿಕ ಕಾರ್ಯಕರ್ತೆ ಡಾ. ಸೋನಾಲಿ ಸರ್ನೋಬತ್ ಸೇರಿದಂತೆ ಹಲವು ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು. ಮುಂಬರುವ ಜುಲೈ 13ರ ಹೋರಾಟಕ್ಕೆ ವ್ಯಾಪಕ ಬೆಂಬಲ ಕ್ರೋಢೀಕರಿಸಲು ಸಂಘಟನೆ ನಿರ್ಧರಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !