ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಿಂದಿ ಚಿತ್ರರಂಗದಲ್ಲಿ ಏಳು ದಶಕಗಳ ಕಾಲ ತನ್ನದೇ ಆದ ಛಾಪು ಮೂಡಿಸಿದ್ದ ಹಿರಿಯ ನಟಿ ಕಾಮಿನಿ ಕೌಶಾಲ್ ಇಂದು (ನವೆಂಬರ್ 14) ವಿಧಿವಶರಾಗಿದ್ದಾರೆ. 98 ವರ್ಷ ವಯಸ್ಸಿನ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. 1946ರಲ್ಲಿ ತೆರೆಕಂಡ ನೀಚಾ ನಗರ ಚಿತ್ರದ ಮೂಲಕ ಅಭಿನಯ ಲೋಕಕ್ಕೆ ಕಾಲಿಟ್ಟ ಕಾಮಿನಿ ಕೌಶಾಲ್, ಬಾಲಿವುಡ್‌ನ ಚಿನ್ನದ ಯುಗದ ಮಹತ್ವದ ಮುಖವಾಗಿದ್ದರು.
ಕಾಮಿನಿ ಕೌಶಾಲ್ ಮೂಲ ಹೆಸರು ಉಮಾ ಕಶ್ಯಪ್. ಲಾಹೋರ್‌ನಲ್ಲಿ ಜನಿಸಿ, ಉತ್ತಮ ಶೈಕ್ಷಣಿಕ ಹಿನ್ನಲೆ ಹೊಂದಿದ ಕುಟುಂಬದಿಂದ ಬಂದವರು. ತಂದೆ ಶಿವರಾಮ್ ಕಶ್ಯಪ್ ಪ್ರಸಿದ್ಧ ಸಸ್ಯಶಾಸ್ತ್ರಜ್ಞರಾಗಿದ್ದರು. ಬಾಲ್ಯದಿಂದಲೇ ಕುದುರೆ ಸವಾರಿ, ಈಜು, ಭರತನಾಟ್ಯ, ಕರಕುಶಲ ಸೇರಿದಂತೆ ಹಲವಾರು ಕಲಾ-ಕ್ರೀಡೆಗಳಲ್ಲಿ ಆಸಕ್ತಿ ಹೊಂದಿದ ಕಾಮಿನಿ, ರಂಗಭೂಮಿ ಮತ್ತು ರೇಡಿಯೋ ನಾಟಕಗಳ ಮೂಲಕ ತಮ್ಮ ಕಲಾ ಪ್ರಯಾಣವನ್ನು ಆರಂಭಿಸಿದ್ದರು.
ಧೋ ಭಾಯಿ, ಶಬ್ನಮ್, ಜಿದ್ದಿ, ಬಡೆ ಸರ್ಕಾರ್, ನೈಟ್ ಕ್ಲಬ್, ಗೋದಾನ್, ಮಹಾ ಚೋರ್ ಸೇರಿದಂತೆ ಅನೇಕ ಪ್ರಮುಖ ಸಿನಿಮಾಗಳಲ್ಲಿ ಅಭಿನಯಿಸಿ ತಮ್ಮ ಪ್ರತಿಭೆಯಿಂದ ಪ್ರೇಕ್ಷಕರ ಮೆಚ್ಚುಗೆ ಪಡೆದಿದ್ದರು. ಅಭಿನಯದೊಂದಿಗೆ ತನ್ನ ಗಂಭೀರತೆ, ಸಂಸ್ಕಾರ, ಮತ್ತು ಸರಳತೆಗಾಗಿ ಅವರು ಹೆಸರಾಗಿದ್ದರು.
2022ರಲ್ಲಿ ಬಿಡುಗಡೆಯಾದ ಲಾಲ್‌ಸಿಂಗ್ ಚಡ್ಡಾ ಸಿನಿಮಾದಲ್ಲೂ ಕಾಣಿಸಿಕೊಂಡಿದ್ದ ಕಾಮಿನಿ ಕೌಶಾಲ್, 2025ರ ಫೆಬ್ರವರಿಯಲ್ಲಿ 98ನೇ ಹುಟ್ಟುಹಬ್ಬವನ್ನು ಆಚರಿಸಿದ್ದರು.

