ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನ ಮತ್ತೊಮ್ಮೆ ರೋಚಕ ಟೆಸ್ಟ್ ಪಂದ್ಯಕ್ಕೆ ಸಾಕ್ಷಿಯಾಯಿತು. ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಕಾದಾಟದ ಮೊದಲ ದಿನ ಬೌಲರ್‌ಗಳ ದಬ್ಬಾಳಿಕೆಯ ದಿನವಾಗಿದ್ದು, ಭಾರತ ಬಿಗಿಯಾದ ಬೌಲಿಂಗ್ ಪ್ರದರ್ಶನದ ಜತೆಗೆ ಬ್ಯಾಟಿಂಗ್ ಆರಂಭದಲ್ಲೂ ತಮ್ಮ ದೃಢತೆಯನ್ನು ತೋರಿಸಿತು.
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಕೋಲ್ಕತ್ತಾ ಟೆಸ್ಟ್ ಪಂದ್ಯದ ಮೊದಲ ದಿನದಾಟ ಮುಕ್ತಾಯಗೊಂಡಿದ್ದು, ದಕ್ಷಿಣ ಆಫ್ರಿಕಾ ಕೇವಲ 159 ರನ್‌ಗಳಿಗೆ ಆಲೌಟ್ ಆಯಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ಆಯ್ಕೆ ಮಾಡಿಕೊಂಡ ಆಫ್ರಿಕಾ ತಂಡಕ್ಕೆ ಭಾರತೀಯ ಬೌಲರ್‌ಗಳ ದಾಳಿಗೆ ಸುಸ್ತಾದರು. ದಕ್ಷಿಣ ಆಫ್ರಿಕಾ ಪರ ಐಡೆನ್ ಮಾರ್ಕ್ರಾಮ್ (31) ಗರಿಷ್ಠ ರನ್ ಗಳಿಸಿದರೂ, ಇತರ ಬ್ಯಾಟ್ಸ್‌ಮನ್‌ಗಳು ಎದುರಾಳಿ ಬೌಲಿಂಗ್‌ಗೆ ತತ್ತರಿಸಿ ಒಂದೇ ಒಂದು ಅರ್ಧಶತಕವೂ ಹೊರಬರಲಿಲ್ಲ.
ಭಾರತ ಪರ ಜಸ್ಪ್ರೀತ್ ಬುಮ್ರಾ ದಿನವಿಡೀ ಮಿಂಚಿದರು. ಕೇವಲ 27 ರನ್ ನೀಡಿ 14 ಓವರ್‌ಗಳಲ್ಲಿ ಐದು ವಿಕೆಟ್ ಕಬಳಿಸಿದ ಬುಮ್ರಾ, ಈಡನ್ ಗಾರ್ಡನ್ಸ್‌ನಲ್ಲಿ ಮತ್ತೊಂದು ಐತಿಹಾಸಿಕ ಸಾಧನೆ ತಮ್ಮ ಖಾತೆಗೆ ಸೇರಿಸಿಕೊಂಡರು. ಅವರೊಂದಿಗೆ ಕುಲ್ದೀಪ್ ಯಾದವ್ ಹಾಗೂ ಮೊಹಮ್ಮದ್ ಸಿರಾಜ್ ತಲಾ ಎರಡು ವಿಕೆಟ್ ಪಡೆದರೆ, ಅಕ್ಷರ್ ಪಟೇಲ್ ಒಂದು ವಿಕೆಟ್ ಪಡೆದರು.
159 ರನ್ ಗುರಿಯನ್ನು ಎದುರಿಸಲು ಮೈದಾನಕ್ಕಿಳಿದ ಭಾರತಕ್ಕೆ ಆರಂಭಿಕ ಆಘಾತ ತಪ್ಪಲಿಲ್ಲ. ಯಶಸ್ವಿ ಜೈಸ್ವಾಲ್ ಕೇವಲ 12 ರನ್‌ಗೆ ಔಟಾದರು. ಆದರೆ ನಂತರ ಕೆಎಲ್ ರಾಹುಲ್ ಮತ್ತು ವಾಷಿಂಗ್ಟನ್ ಸುಂದರ್ ಜೋಡಿ ತಾಳ್ಮೆಯ ಬ್ಯಾಟಿಂಗ್ ಪ್ರದರ್ಶಿಸಿ, ಮೊದಲ ದಿನದಾಟ ಅಂತ್ಯದ ವೇಳೆಗೆ ಭಾರತ ಒಂದು ವಿಕೆಟ್ ಕಳೆದುಕೊಂಡು 37 ರನ್ ಗಳಿಸಿತು. ರಾಹುಲ್ 13 ರನ್ ಹಾಗೂ ಸುಂದರ್ ಆರು ರನ್‌ಗಳೊಂದಿಗೆ ಅಜೇಯರಾಗಿದ್ದಾರೆ.
ಭಾರತ ಇನ್ನೂ ದಕ್ಷಿಣ ಆಫ್ರಿಕಾಕ್ಕಿಂತ 122 ರನ್ ಹಿಂದೆ ಇದ್ದರೂ, ಎರಡನೇ ದಿನ ರಾಹುಲ್–ಸುಂದರ್ ಜೋಡಿ ಭರ್ಜರಿ ಇನ್ನಿಂಗ್ಸ್ ಆಡಿದರೆ ಭಾರತ ಪಂದ್ಯವನ್ನು ಸ್ಪಷ್ಟವಾಗಿ ತಮ್ಮ ನಿಯಂತ್ರಣಕ್ಕೆ ತರುವ ಸಾಧ್ಯತೆ ಸಾಕಷ್ಟಿದೆ.

