ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮ್ಮ ಜೀವಮಾನದಲ್ಲಿ ಸಾವಿರಾರು ಮರಗಳನ್ನು ನೆಟ್ಟು ಪೋಷಿಸಿದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ, ‘ವೃಕ್ಷಮಾತೆ’ ಸಾಲುಮರದ ತಿಮ್ಮಕ್ಕ ಅವರು ಶುಕ್ರವಾರ ಬೆಳಗ್ಗೆ ನಿಧನರಾಗಿದ್ದಾರೆ. 114 ವರ್ಷ ವಯಸ್ಸಿನ ತಿಮ್ಮಕ್ಕ ಅವರು ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಮತ್ತು ಎರಡು ದಿನಗಳ ಹಿಂದೆ ಬೆಂಗಳೂರಿನ ಜಯನಗರದ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಇಂದು ಅಂತಿಮ ವಿಧಿವಿಧಾನ
ತಿಮ್ಮಕ್ಕ ಅವರ ಅಂತ್ಯಕ್ರಿಯೆಯನ್ನು ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಜ್ಞಾನಭಾರತಿ ಕಲಾಗ್ರಾಮದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಗುತ್ತದೆ. ಈ ಕುರಿತು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್ ಅವರು ಅಧಿಕೃತ ಆದೇಶ ನೀಡಿದ್ದಾರೆ.
ಸಾರ್ವಜನಿಕ ದರ್ಶನ: ಇಂದು ಬೆಳಗ್ಗೆ 8:30 ರಿಂದ ಕಲಾಕ್ಷೇತ್ರದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.
ಗಣ್ಯರ ಭೇಟಿ: ರಾಜಕೀಯ ಗಣ್ಯರು, ಚಿತ್ರರಂಗದ ಪ್ರಮುಖರು ಹಾಗೂ ಅಪಾರ ಸಂಖ್ಯೆಯ ಪರಿಸರ ಪ್ರೇಮಿಗಳು ಅಂತಿಮ ದರ್ಶನದಲ್ಲಿ ಪಾಲ್ಗೊಂಡು ತಿಮ್ಮಕ್ಕನವರ ಕೊಡುಗೆಯನ್ನು ಸ್ಮರಿಸಿದ್ದಾರೆ.
ಮಕ್ಕಳಿಲ್ಲದ ತಿಮ್ಮಕ್ಕನವರನ್ನು ಅವರ ಸಾಕು ಮಗ ಉಮೇಶ್ ಬಳ್ಳೂರು ಅವರು ನೋಡಿಕೊಳ್ಳುತ್ತಿದ್ದರು. ಇಡೀ ದೇಶಕ್ಕೆ ಪರಿಸರ ಸಂರಕ್ಷಣೆಯ ಮಹತ್ವವನ್ನು ಸಾರಿ ಹೇಳಿದ ಈ ಮಹಾನ್ ಚೇತನದ ನಿರ್ಗಮನಕ್ಕೆ ನಾಡಿನಾದ್ಯಂತ ಜನರು ಕಂಬನಿ ಮಿಡಿದಿದ್ದಾರೆ.

