Saturday, November 15, 2025

ದಿ ಎಕ್ಸಿಟ್ ಡೋರ್: IPL 19 ಮಿನಿ ಹರಾಜಿಗೂ ಮುನ್ನಾ RCBಯಿಂದ ಆಲ್‌ರೌಂಡರ್‌ಗೆ ಕೊಕ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19ರ ಮಿನಿ ಹರಾಜಿಗೆ ದಿನಗಣನೆ ಶುರುವಾಗಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಕೆಲವು ಪ್ರಮುಖ ಆಟಗಾರರನ್ನು ರಿಲೀಸ್ ಮಾಡುವ ನಿರ್ಧಾರಕ್ಕೆ ಬಂದಿದೆ. ಈ ಬಿಡುಗಡೆ ಪಟ್ಟಿಯಲ್ಲಿ ಇಂಗ್ಲೆಂಡ್‌ನ ಸ್ಟಾರ್ ಆಲ್‌ರೌಂಡರ್ ಲಿಯಾಮ್ ಲಿವಿಂಗ್‌ಸ್ಟೋನ್ ಅವರ ಹೆಸರು ಮುಂಚೂಣಿಯಲ್ಲಿದೆ ಎನ್ನಲಾಗಿದೆ.

ಕಳೆದ ಸೀಸನ್‌ನಲ್ಲಿ ಲಿವಿಂಗ್‌ಸ್ಟೋನ್ ಅವರ ಕಳಪೆ ಪ್ರದರ್ಶನದಿಂದಾಗಿ ಆರ್​​ಸಿಬಿ ಈ ಕಠಿಣ ನಿರ್ಧಾರ ಕೈಗೊಂಡಿದೆ ಎಂದು ಫ್ರಾಂಚೈಸಿ ಮೂಲಗಳು ತಿಳಿಸಿವೆ. ಭಾರಿ ಮೊತ್ತ ನೀಡಿ ತಂಡಕ್ಕೆ ಸೇರಿಸಿಕೊಂಡಿದ್ದ ಆಟಗಾರನಿಂದ ನಿರೀಕ್ಷಿತ ಪ್ರದರ್ಶನ ಬಾರದ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ.

ಕಳಪೆ ಪ್ರದರ್ಶನದ ವಿಶ್ಲೇಷಣೆ

ಲಿಯಾಮ್ ಲಿವಿಂಗ್‌ಸ್ಟೋನ್ ಕಳೆದ ಸೀಸನ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿದ್ದು 10 ಪಂದ್ಯಗಳು. ಈ ಪಂದ್ಯಗಳಲ್ಲಿ ಅವರು ಗಳಿಸಿದ್ದು ಕೇವಲ 111 ರನ್‌ಗಳು (ಒಂದು ಅರ್ಧಶತಕದೊಂದಿಗೆ), ಅಂದರೆ ಸರಾಸರಿ ಕೇವಲ 16 ರನ್. ಆಲ್‌ರೌಂಡರ್ ಆಗಿದ್ದರೂ, ಬೌಲಿಂಗ್‌ನಲ್ಲಿ ಪಡೆದಿರುವುದು ಕೇವಲ 2 ವಿಕೆಟ್‌ಗಳು ಮಾತ್ರ.

RCBಗೆ ಆರ್ಥಿಕ ಲಾಭ

ಲಿವಿಂಗ್‌ಸ್ಟೋನ್ ಅವರನ್ನು ಬಿಡುಗಡೆ ಮಾಡುವ ಮೂಲಕ RCB ತಂಡದ ಪರ್ಸ್ ಮೊತ್ತಕ್ಕೆ 8.75 ಕೋಟಿ ರೂ. ಸೇರ್ಪಡೆಯಾಗಲಿದೆ. ಕಳೆದ ಸೀಸನ್‌ನಲ್ಲಿ ಆರ್​ಸಿಬಿ, ಲಿವಿಂಗ್‌ಸ್ಟೋನ್ ಅವರನ್ನು ಈ ಮೊತ್ತಕ್ಕೆ ಖರೀದಿಸಿತ್ತು. ಈಗ ಈ ಹಣ ಹರಾಜು ಪ್ರಕ್ರಿಯೆಯಲ್ಲಿ ಹೊಸ ಆಟಗಾರರನ್ನು ಖರೀದಿಸಲು ಲಭ್ಯವಾಗಲಿದೆ.

ಈ ಪ್ರಮುಖ ಆಟಗಾರನನ್ನು ಬಿಡುಗಡೆ ಮಾಡುವ ಮೂಲಕ, ಆರ್​ಸಿಬಿ ಮುಂಬರುವ ಮಿನಿ ಹರಾಜಿನಲ್ಲಿ ಉತ್ತಮ ಆಟಗಾರರನ್ನು ಗುರಿಯಾಗಿಸಲು ದೊಡ್ಡ ಮೊತ್ತವನ್ನು ಉಳಿತಾಯ ಮಾಡಿಕೊಂಡಿದೆ.

RCB ತಂಡದಲ್ಲಿ ಉಳಿದಿರುವ ಪ್ರಮುಖ ಆಟಗಾರರ ಪಟ್ಟಿ (ರಿಲೀಸ್‌ಗೂ ಮುನ್ನ):

ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಯಶ್ ದಯಾಳ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಜೋಶ್ ಹೇಝಲ್​ವುಡ್, ರಾಸಿಖ್ ಸಲಾಂ, ಸುಯಶ್ ಶರ್ಮಾ, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ನುವಾನ್ ತುಷಾರ, ರೊಮಾರಿಯೋ ಶೆಫರ್ಡ್, ಜೇಕಬ್ ಬೆಥೆಲ್, ಮನೋಜ್ ಭಾಂಡಗೆ, ಸ್ವಸ್ತಿಕ್ ಚಿಕಾರ, ದೇವದತ್​ ಪಡಿಕ್ಕಲ್, ಮೋಹಿತ್ ರಾಠಿ, ಅಭಿನಂದನ್ ಸಿಂಗ್, ಲುಂಗಿ ಎನ್​ಗಿಡಿ.

error: Content is protected !!