ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿ ಭೀಕರ ದುರಂತ ಸಂಭವಿಸಿದ್ದು, ಕಾರು ಅಣೆಕಟ್ಟಿಗೆ ಬಿದ್ದ ಪರಿಣಾಮ ಮೂವರು ವ್ಯಕ್ತಿಗಳು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು, ಮತ್ತೊಬ್ಬರು ನಾಪತ್ತೆಯಾದ ಘಟನೆ ನಡೆದಿದೆ.
ನಾಪತ್ತೆಯಾದವರಿಗೆ ಹುಡುಕಾಟ ಕಾರ್ಯ ಮುಂದುವರಿದಿದ್ದು, ಮೃತರಲ್ಲಿ ಜಮ್ಶೆಡ್ಪುರ್ನ ಪ್ರಧಾನ ಜಿಲ್ಲಾ ನ್ಯಾಯಾಧೀಶರ ಇಬ್ಬರು ಶಸ್ತ್ರಸಜ್ಜಿತ ದೇಹರಕ್ಷಕರು ಸೇರಿದಂತೆ ಕಾರಿನ ಚಾಲಕನೂ ಇದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆ ಶುಕ್ರವಾರ ತಡ ರಾತ್ರಿ ರಾಂಚಿಯ ನಾಗರಿ ಪೊಲೀಸ್ ಠಾಣಾ ವ್ಯಾಪ್ತಿಯ ಹಾಟಿಯಾ ಅಣೆಕಟ್ಟಿನಲ್ಲಿ ನಡೆದಿದೆ. ಕಾರಿನಲ್ಲಿ ನಾಲ್ವರು ಇದ್ದರೆಂದು ತಿಳಿದುಬಂದಿದೆ.
“ಇಲ್ಲಿಯವರೆಗೂ ಕಾರಿನ ಚಾಲಕ ಹಾಗೂ ಇಬ್ಬರು ಪೊಲೀಸ್ ಸಿಬ್ಬಂದಿಗಳ ಮೃತದೇಹಗಳನ್ನು ಹುಡುಕಿ ಪತ್ತೆಹಚ್ಚಿದ್ದೇವೆ. ಇನ್ನೊಬ್ಬರು ಇನ್ನೂ ನಾಪತ್ತೆಯಾಗಿದ್ದು, ಹುಡುಕಾಟ ಮುಂದುವರೆದಿದೆ,” ಎಂದು ಹಾಟಿಯಾ ಉಪವಿಭಾಗೀಯ ಪೊಲೀಸ್ ಅಧಿಕಾರಿ (ಡಿಎಸ್ಪಿ) ಪ್ರಮೊದ್ ಮಿಶ್ರಾ ತಿಳಿಸಿದ್ದಾರೆ.
ಅಣೆಕಟ್ಟಿನಲ್ಲಿ ನಾಪತ್ತೆಯಾದ ವ್ಯಕ್ತಿಯನ್ನು ಪತ್ತೆಹಚ್ಚಲು SDRF ತಂಡಗಳು ಹಾಗೂ ಸ್ಥಳೀಯ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ದುರಂತದ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.

