ಹೊಸದಿಗಂತ ವರದಿ, ಪುತ್ತೂರು:
ದ.ಕ. ಜಿಲ್ಲೆಯಲ್ಲಿ ಕೆಲವು ದಿನಗಳಿಂದ ನಡೆದಿರುವ ಅಹಿತಕರ ಘಟನೆಗಳ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಎಲ್ಲಾ ಕಡೆ ನಿಗಾ ವಹಿಸಿದೆ. ಕಾನೂನು ಸುವ್ಯವಸ್ಥೆಯ ದೃಷ್ಟಿಯಿಂದ ಹೆಚ್ಚುವರಿ ಕ್ರಮಗಳನ್ನು ವಹಿಸಲಾಗಿದೆ ಎಂದು ರಾಜ್ಯ ಕಾನೂನು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್ ಹೇಳಿದ್ದಾರೆ.
ಗುರುವಾರ ಪುತ್ತೂರು ನಗರ ಪೊಲೀಸ್ ಠಾಣೆಗೆ ಭೇಟಿ ನೀಡಿದ ಅವರು ಮಾಧ್ಯಮದ ಜತೆ ಮಾತನಾಡಿದರು. ಜಿಲ್ಲೆಯಲ್ಲಿ ದ್ವಿಚಕ್ರ ವಾಹನ ಸಂಚಾರದ ಸಂದರ್ಭದಲ್ಲಿ ಹಿಂಬದಿ ಪುರುಷ ಸವಾರರರಿಗೆ ಅವಕಾಶ ನಿರಾಕರಿಸಿ ಕ್ರಮ ಕೈಗೊಳ್ಳಲಾಗಿದೆ. ಇದು 18 ರಿಂದ 60 ವರ್ಷದೊಳಗಿನವರಿಗೆ ಅನ್ವಯವಾಗುತ್ತದೆ. ಮಹಿಳೆಯರು, ಹಿರಿಯರು ಮತ್ತು 18 ವರ್ಷ ಕೆಳಗಿನವರಿಗೆ ಈ ನಿಬಂಧನೆ ಅನ್ವಯವಾಗುವುದಿಲ್ಲ. ಈ ನಿಯಮವನ್ನು ಒಂದು ವಾರ ಅಳವಡಿಸಿದ್ದೇವೆ. ಮತ್ತೆ ನೋಡುತ್ತೇವೆ ಎಂದು ಹೇಳಿದರು.
ನಾನು ರುಟೀನ್ ಭೇಟಿ ನೀಡಿದ್ದೇನೆ. ಇಲ್ಲಿ ಏನೂ ಸಮಸ್ಯೆ ಇಲ್ಲ. ಆದರೆ ಪೊಲೀಸರು ಚೆನ್ನಾಗಿ ಕೆಲಸ ಮಾಡಬೇಕೆಂಬ ದೃಷ್ಟಿಯಿಂದ ಅವರಿಗೆ ಧೈರ್ಯ ತುಂಬಿದ್ದೇನೆ. ಒಳ್ಳೆಯ ಜನರ ಜತೆಗೆ ನಾವು ಒಳ್ಳೆತನದಿಂದ ಇರುತ್ತೇವೆ. ತರಲೆ ಮಾಡುವವರ ವಿರುದ್ಧ ನಾವು ಕ್ರಮ ಕೈಗೊಳ್ಳುತ್ತೇವೆ. ಆ ಸಂದೇಶ ನೀಡಲು ನಾನು ಬಂದಿದ್ದೇನೆ ಎಂದು ಎಡಿಜಿಪಿ ಹೇಳಿದರು.
ಪುತ್ತೂರು ನಗರದಲ್ಲಿ ಈ ಹಿಂದೆ ಅಳವಡಿಸಿರುವ ಬಹುತೇಕ ಸಿಸಿ ಕ್ಯಾಮರಾಗಳು ಕಾರ್ಯನಿರ್ವಹಿಸದೇ ಇರುವ ಕುರಿತು ಮಾಧ್ಯಮದವರಿಂದ ಮಾಹಿತಿ ಪಡೆದ ಎಡಿಜಿಪಿ, ಅವುಗಳನ್ನು ಸಮರ್ಪಕಗೊಳಿಸಲು ಸೂಚನೆ ನೀಡುತ್ತೇನೆ. ಈ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದರು.
ತಾಸುಗಳ ಕಾಲ ನಗರ ಪೊಲೀಸ್ ಠಾಣೆಯಲ್ಲಿ ಪೊಲೀಸರೊಂದಿಗೆ ಸಂವಾದ ನಡೆಸಿದ ಎಡಿಜಿಪಿಯವರು ಪೊಲೀಸರಿಗೆ ಹುರಿದುಂಬಿಸಿದರು. ಠಾಣೆಯ ಹೊರಭಾಗಕ್ಕೆ ಬಂದಾಗ ಠಾಣೆಗೆ ಭೇಟಿ ನೀಡಿದ ಸಾರ್ವಜನಿಕರಲ್ಲಿ ಮಾತುಕತೆ ನಡೆಸಿದರು.
ಈ ಸಂದರ್ಭದಲ್ಲಿ ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರೇ ಹಾಗೂ ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಋಷಿಕೇಶ್ ಸೋನಾವಣೆ ಜತೆಗಿದ್ದರು.