ಗೋವಾ ಸ್ವಾತಂತ್ರ್ಯಕ್ಕೆ ಹೋರಾಡಿದ್ದ ಕೃಷ್ಣನಾಥರಿಗೆ 25 ವರ್ಷ ಜೈಲುಶಿಕ್ಷೆ ವಿಧಿಸಲಾಗಿತ್ತು..

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ ( ಸ್ವಾತಂತ್ರೋತ್ಸವ ಅಮೃತ ಮಹೋತ್ಸವ ವಿಶೇಷ)
ಗೋವಾದಲ್ಲಿ ಪೋರ್ಚುಗೀಸರ ಆಡಳಿತ ವಿರೋಧಿಸಿ ದಂಗೆ ಎದ್ದವರಲ್ಲಿ ಕೃಷ್ಣನಾಥ್ ರಾಮಚಂದ್ರ ಭಟ್ ಅವರು ಪ್ರಮುಖರು.
ಅವರು ದಕ್ಷಿಣ ಗೋವಾದ ಕೆನಕೋನಾ ತಾಲೂಕಿನ ಪೊಯಿಂಗುನಿಮ್ ಗ್ರಾಮದಲ್ಲಿ 1929 ರ ಮಾರ್ಚ್ 12ರಂದು ಜನಿಸಿದರು. ಎಳವೆಯಲ್ಲೇ ಸ್ವಾತಂತ್ರ್ಯ ಹೋರಾಟಗಳಲ್ಲಿ ತೊಡಗಿಕೊಂಡ ಕೃಷ್ಣಾನಾಥ್‌, ಆಜಾದ್ ಗೋಮಾಂತಕ ದಳದ ಸದಸ್ಯತ್ವ ಪಡೆದು ಸಂಘಟನೆಯ ಭೂಗತ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದರು. ಗೋವಾದ ವಿವಿಧ ಭಾಗಗಳಿಗೆ ಸಂಚರಿಸಿ ಜನರಲ್ಲಿ ಸ್ವಾತಂತ್ರ್ಯ ಭಾವನೆಗಳನ್ನು ಉದ್ದೀಪಿಸುತ್ತಿದ್ದರು.
ನಗರದ ಪ್ರಮುಖ ಸ್ಥಳಗಳಲ್ಲಿ ರಾಷ್ಟ್ರೀಯತೆಯನ್ನು ಪ್ರೇರೇಪಿಸುವ ಪೋಸ್ಟರ್‌ಗಳನ್ನು ಅಂಟಿಸುತ್ತಿದ್ದರು. ಜೊತೆಗೆ ಪ್ರಮುಖ ಸಂದರ್ಭಗಳಲ್ಲಿ ಭಾರತೀಯ ತ್ರಿವರ್ಣ ಧ್ವಜವನ್ನು ಹಾರಿಸುತ್ತಿದ್ದರು. ಹೀಗಿರುವಾಗ ಕೃಷ್ಣಾನಾಥ್ ರ ಜೀವನದಲ್ಲಿ ಪ್ರಮುಖ ಘಟನೆಯೊಂದು ನಡೆಯಿತು.  ಸ್ವಾತಂತ್ರ್ಯ ಹೋರಾಟಗಾರರು ಮತ್ತು ಗೋವಾದ ರಾಷ್ಟ್ರೀಯವಾದಿಗಳಿಗೆ ಕಿರುಕುಳ ನೀಡುತ್ತಿದ್ದ ಪೋರ್ಚುಗೀಸ್ ಬೆಂಬಲಿಗ ಜೆರೊನೊಮಿಯೊ ಬ್ಯಾರೆಟ್ಟೊ ಎಂಬಾತನ ಹತ್ಯೆಗೆ ಸಂಬಂಧಿಸಿದಂತೆ ಅವರನ್ನು 1956 ರ ಸೆಪ್ಟೆಂಬರ್  19 ರಂದು ಬಂಧಿಸಲಾಯಿತು. ಬಂಧನದ ಬಳಿಕ ಅವರನ್ನು ಮೂರು ತಿಂಗಳ ಕಾಲ ಪೊಲೀಸ್ ಲಾಕ್‌ಅಪ್‌ನಲ್ಲಿ ಇರಿಸಿಲಾಗಿತ್ತು. ಈ ವೇಳೆ ಪೊಲೀಸರು ತೀವ್ರವಾಗಿ ಹಲ್ಲೆ ನಡೆಸಿದರು. TMT (ಪೋರ್ಚುಗೀಸ್ ಮಿಲಿಟರಿ ಟ್ರಿಬ್ಯೂನಲ್) ನಿಂದ ಕೃಷ್ಣನಾಥ್‌ ರ  ವಿಚಾರಣೆಗೆ ಒಳಪಡಿಸಲಾಯಿತು.‌ ಆಬಳಿಕ 1957 ರ ಆಗಸ್ಟ್ 30 ರಂದು ಅವರಿಗೆ 25 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ಗೋವಾ ಪೊರ್ಚುಗೀಸರಿಂದ ಮುಕ್ತಿಗೊಂಡ ಬಳಿಕ ಕೃಷ್ಣನಾಥ್‌ ಸೆರೆವಾಸದಿಂದ ಮುಕ್ತರಾದರು. 1973 ರಲ್ಲಿ ಕೇಂದ್ರ ಸರ್ಕಾರವು ತಾಮ್ರಪತ್ರ ಪ್ರಶಸ್ತಿಯನ್ನು  ನೀಡಿ ಅವರ ಸ್ವಾತಂತ್ರ್ಯ ಹೋರಾಟವನ್ನು ಗೌರವಿಸಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!